ನಗದು, ಮದ್ಯ ಬಳಸದೆ ಚುನಾವಣೆ ಎದುರಿಸುವ ಧೈರ್ಯ ಕೆಸಿಆರ್‌ಗೆ ಇಲ್ಲ: ಕಾಂಗ್ರೆಸ್‌

Update: 2023-10-18 11:35 GMT

ಕೆಸಿಆರ್‌

ಹೈದರಾಬಾದ್:‌ ಮತದಾರರನ್ನು ಸೆಳೆಯಲು ನಗದು ಮತ್ತು ಮದ್ಯ ಬಳಸದೆ ಚುನಾವಣೆ ಎದುರಿಸುವ ಧೈರ್ಯ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಅವರಿಗಿಲ್ಲ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ. ವಿಧಾನಸಭೆಗೆ ಕೆಲವೇ ವಾರಗಳು ಬಾಕಿಯಿದ್ದಂತೆ ಕಾಂಗ್ರೆಸ್‌ ಪಕ್ಷದಿಂದ ಈ ತೀವ್ರ ವಾಗ್ದಾಳಿ ನಡೆದಿದೆ.

ತಮ್ಮ ಪಕ್ಷಗಳು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ನಗದು ಅಥವಾ ಮದ್ಯ ಬಳಸುವುದಿಲ್ಲ ಎಂದು ತಮ್ಮೊಂದಿಗೆ ಪ್ರತಿಜ್ಞೆಗೈಯ್ಯಲು ತೆಲಂಗಾಣದ ಹುತಾತ್ಮರ ಸ್ಮಾರಕಕ್ಕೆ ಬರುವಂತೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರು ಮುಖ್ಯಮಂತ್ರಿಗೆ ಸವಾಲೆಸೆದ ಬೆನ್ನಲ್ಲೇ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು.

ಕಾಂಗ್ರೆಸ್‌ ಪಕ್ಷವು ಮತದಾರರಿಗೆ ನಗದು, ಮದ್ಯ ಮತ್ತಿತರ ಉಡುಗೊರೆಗಳನ್ನು ನೀಡುತ್ತಿದೆ ಎಂದು ಆಡಳಿತ ಭಾರತ್‌ ರಾಷ್ಟ್ರ ಸಮಿತಿ ಆರೋಪಿಸಿದ ನಂತರ ರೆಡ್ಡಿ ಅವರು ಮುಖ್ಯಮಂತ್ರಿಗೆ ಸವಾಲೆಸೆದಿದ್ದರು.

ರೆಡ್ಡಿ ಮತ್ತವರ ಬೆಂಬಲಿಗರು ಹುತಾತ್ಮ ಸ್ಮಾರಕಕ್ಕೆ ಮಂಗಳವಾರ ಆಗಮಿಸುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದರು.

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಎಂಟೇ ದಿನಗಳಲ್ಲಿ ರೂ 130 ಕೋಟಿ ಮೌಲ್ಯದ ನಗದು ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ಆಯೋಗ ನೀಡಿದ ಮಾಹಿತಿಯಂತೆ ರೂ 71 ಕೋಟಿ ನಗದು, ರೂ 4.58 ಕೋಟಿ ಮೌಲ್ಯದ ಗಾಂಜಾ, ರೂ 40 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳು ಮತ್ತು ಲ್ಯಾಪ್‌ಟಾಪ್‌ಗಳು, ಕುಕ್ಕರ್‌ಗಳು, ಸೀರೆಗಳು, ಹೊಲೆಗೆಯಂತ್ರಗಳು ಸೇರಿದಂತೆ ರೂ 6.29 ಕೋಟಿಗೂ ಅಧಿಕ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News