ಕೇಜ್ರಿವಾಲ್ ಬಂಧನ ಬಿಜೆಪಿ ಶವಪೆಟ್ಟಿಗೆಯ ಕೊನೆಯ ಮೊಳೆ: ಆಮ್ ಆದ್ಮಿ ಪಕ್ಷ
ಹೊಸದಿಲ್ಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರು, ದೆಹಲಿ ಸಂಪುಟದ ಸಚಿವರು ಮತ್ತು ಶಾಸಕರು ಭಾನುವಾರ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಿ ಬಂಧಿತ ನಾಯಕನ ಮೇಲೆ ಸಾಮೂಹಿಕ ನಿಷ್ಠೆ ಪ್ರದರ್ಶಿಸಿದರು. ಬಿಜೆಪಿ ಸರ್ವಾಧಿಕಾರ ಧೋರಣೆಯನ್ನು ಪ್ರದರ್ಶಿಸುತ್ತಿದ್ದು, ಈ ಬಂಧನಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬೆಳಿಗ್ಗೆ 11 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು, ಮುಖಂಡರು ಸರದಿಯಂತೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಸೆರೆವಾಸದಲ್ಲಿರುವ ಕೇಜ್ರಿವಾಲ್ ಅವರ ಬೃಹತ್ ಚಿತ್ರವನ್ನು ಪರದೆಯಲ್ಲಿ ಬಳಸಿಕೊಂಡು, "ಕೇಜ್ರಿವಾಲ್ ಅವರಿಗೆ ಆಶೀರ್ವಾದ: ಸಾಮೂಹಿಕ ಉಪವಾಸ" ಎಂಬ ಶೀರ್ಷಿಕೆ ನೀಡಿದ್ದರು. ದೆಹಲಿ ಸ್ಪೀಕರ್ ರಾಮ್ ನಿವಾಸ್ ಗೋಯಲ್, ಉಪ ಸ್ಪೀಕರ್ ರಾಖಿ ಬಿರ್ಲಾ, ಸಂಪುಟ ಸಚಿವರಾದ ಗೋಪಾಲ ರಾಯ್, ಸೌರಭ್ ಭಟ್ಟಾಚಾರ್ಯ, ಅತಿಶಿ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಮೇಯರ್ ಶೆಲ್ಲಿ ಒಬೆರಾಯ್ ಮತ್ತಿತರರು ಭಾಗವಹಿಸಿದ್ದರು.
"ಪಕ್ಷದ ಮುಖಂಡರ ಉಪವಾಸ ಬಿಜೆಪಿಯ ನಿದ್ದೆಗೆಡಿಸಿದ್ದು, ಕೇಜ್ರಿವಾಲ್ ಬಂಧನ ಬಿಜೆಪಿ ಶವಪೆಟ್ಟಿಗೆಯ ಕೊನೆಯ ಮೊಳೆ ಎನ್ನುವುದು ಸಾಬೀತಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರ ಉಪವಾಸ ಬ್ರಿಟ್ ಆಡಳಿತದ ಬುಡವನ್ನೇ ಅಲ್ಲಾಡಿಸಿತು. ಇಂದು ಎಎಪಿ ಉಪವಾಸ, ಬಿಜೆಪಿಯ ಸರ್ವಾಧಿಕಾರಿಯ ನಿದ್ದೆಗೆಡಿಸಲಿದೆ. ನಮ್ಮ ದೇಶ ಇದೀಗ ಎಚ್ಚರಗೊಂಡಿದೆ. ನಿರಂಕುಶ ಪ್ರಭುತ್ವದ ಕೊನೆ ಸನಿಹದಲ್ಲಿದೆ" ಎಂದು ಅತಿಶಿ ಹೇಳಿದರು.
ಅಬಕಾರಿ ನೀತಿ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದಿರುವ ಸಂಜಯ್ ಸಿಂಗ್, ಅಮಾಯಕ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿಸಿ ಜೈಲಿಗೆ ತಳ್ಳಲಾಗಿದೆ. ದೇಶದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಕೇಜ್ರಿವಾಲ್ ಪರ ಪ್ರತಿಭಟನೆಗಳು ನಡೆದಿವೆ. ಇದು ನಮ್ಮ ದೊಡ್ಡ ಸಾಧನೆ, ನಿರಂಕುಶ ಪ್ರಭುತ್ವ ಸರ್ಕಾರ ವಿರುದ್ಧದ ಸಂದೇಶ ಜನತೆಯನ್ನು ತಲುಪಿದೆ ಎನ್ನುವುದು ಸ್ಪಷ್ಟ ಎಂದು ಬಣ್ಣಿಸಿದರು.