ಕೇರಳ: 15 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಸಿಪಿಎಂ
ತಿರುವನಂತಪುರ: ಕೇರಳದ ಆಡಳಿತಾರೂಢ ಎಡರಂಗದ ಪ್ರಮುಖ ಪಾಲುದಾರ ಸಿಪಿಎಂ ಮುಂಬರುವ ಸಾರ್ವತ್ರಿಕ ಚುನಾವಣೆಗಾಗಿ ರಾಜ್ಯದ 15 ಲೋಕಸಭಾ ಕ್ಷೇತ್ರಗಳಿಗೆ ಮಾಜಿ ರಾಜ್ಯ ಸಚಿವರಾದ ಕೆ.ಕೆ.ಶೈಲಜಾ ಮತ್ತು ಟಿ.ಎಂ.ಥಾಮಸ್ ಇಸಾಕ್ ಸೇರಿದಂತೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ನಿಂದ ಗಮನಾರ್ಹ ಸಂಖ್ಯೆಯಲ್ಲಿ ಸ್ಥಾನಗಳನ್ನು ಕಿತ್ತುಕೊಳ್ಳುವ ತನ್ನ ಪ್ರಯತ್ನದ ಅಂಗವಾಗಿ ಸಿಪಿಎಂ ನಾಲ್ವರು ಹಾಲಿ ಶಾಸಕರ ಜೊತೆಗೆ ತನ್ನ ಓರ್ವ ಲೋಕಸಭಾ ಮತ್ತು ಓರ್ವ ರಾಜ್ಯಸಭಾ ಸದಸ್ಯರನ್ನೂ ಸಿಪಿಎಂ ಕಣಕ್ಕಿಳಿಸಿದೆ.
2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಿಪಿಎಂ ನೇತೃತ್ವದ ಎಡರಂಗವು ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.
ಎಲ್ಡಿಎಫ್ ಮೈತ್ರಿಕೂಟದ ಇತರ ಪಾಲುದಾರ ಪಕ್ಷಗಳಾದ ಸಿಪಿಐ ಮತ್ತು ಕೇರಳ ಕಾಂಗ್ರೆಸ್ (ಎಂ) ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿವೆ.
ಮಂಗಳವಾರ ಸಿಪಿಎಂ ತನ್ನ 15 ಅಭ್ಯರ್ಥಿಗಳನ್ನು ಪ್ರಕಟಿಸುವುದರೊಂದಿಗೆ ರಾಜ್ಯದಲ್ಲಿಯ ಎಲ್ಲ 20 ಲೋಕಸಭಾ ಕ್ಷೇತ್ರಗಳಿಗೆ ಎಲ್ಡಿಎಫ್ ಅಭ್ಯರ್ಥಿಗಳ ಘೋಷಣೆಯಾಗಿದೆ.
ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್,ನಟ-ಶಾಸಕ ಎಂ.ಮುಕಶ್,ಶಾಸಕ ವಿ.ಜಾಯ್,ಹಾಲಿ ಸಂಸದ ಎ.ಎಂ.ಆರಿಫ್,ರಾಜ್ಯಸಭಾ ಸದಸ್ಯ ಎಲ್ಮರಂ ಕರೀಂ,ಮಾಜಿ ಸಂಸದ ಜಾಯ್ಸ್ ಜಾರ್ಜ್,ಮಾಜಿ ಸಚಿವ ಸಿ.ರವೀಂದ್ರನಾಥ್ ಮತ್ತಿತರರು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.