ಖಾಲಿಸ್ತಾನಿ ಉಗ್ರ ಪನ್ನೂನ್ ಹತ್ಯೆ ಸಂಚು ಪ್ರಕರಣ ; ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕದ ದೋಷಾರೋಪಣೆ
ಹೊಸದಿಲ್ಲಿ: ಖಾಲಿಸ್ತಾನ್ ರಾಷ್ಟ್ರದ ಸ್ಥಾಪನೆಯನ್ನು ಪ್ರತಿಪಾದಿಸಿದ ಅಮೆರಿಕ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನೂನ್ ನನ್ನು ಹತ್ಯೆಗೈಯಲು ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತ ಸಂಚು ರೂಪಿಸಿದ್ದಾನೆಂದು ಅಮೆರಿಕ ದೋಷಾರೋಪ ಹೊರಿಸಿದೆ.
ಮಾದಕದ್ರವ್ಯ ಕಳ್ಳಸಾಗಣೆದಾರನೆನ್ನಲಾದ ನಿಖಿಲ್ ಗುಪ್ತಾನನನು ಕಳೆದ ಜೂನ್ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳು ಬಂಧಿಸಿದ್ದು, ಆತ ಗಡಿಪಾರುಗೊಳ್ಳುವ ನಿರೀಕ್ಷೆಯಲ್ಲಿದ್ದಾನೆ.
‘‘ಆರೋಪಿಯು ಸಿಖ್ಖರಿಗಾಗಿ ಪ್ರತ್ಯೇಕ ದೇಶದ ಸ್ಥಾಪನೆಯನ್ನು ಪ್ರತಿಪಾದಿಸಿದ್ದ ನ್ಯೂಯಾರ್ಕ್ ನಗರದಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆಗೈಯಲು ಸಂಚು ಹೂಡಿದ್ದನು’’ ಎಂದು ಅಮೆರಿಕದ ಅಟಾರ್ನಿ ಕಚೇರಿಯ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
“ಅಮೆರಿಕದ ನೆಲದಲ್ಲಿ ಅಮೆರಿಕದ ಪ್ರಜೆಗಳನ್ನು ಹತ್ಯೆಗೈಯುವ ಯಾವುದೇ ಪ್ರಯತ್ನಗಳನ್ನು ನಾವು ಸಹಿಸಲಾರೆವು ಹಾಗೂ ಇಲ್ಲಿರುವ ಅಥವಾ ವಿದೇಶದಲ್ಲಿರುವ ಅಮೆರಿಕನ್ನರಿಗೆ ಹಾನಿಮಾಡುವ ಅಥವಾ ಅವರ ಸದ್ದಡಗಿಸಲು ಬಯಸುವ ಯಾರನ್ನೇ ಆದರೂ ಅಡ್ಡಿಪಡಿಸುವ, ತನಿಖೆ ನಡೆಸುವ,ವಿಚಾರಣೆಗೊಳಪಡಿಸಲು ಸದಾ ಸಿದ್ಧವಿರುವುದು” ಎಂದು ವಿಲಿಯಮ್ಸ್ ಹೇಳಿದ್ದಾರೆ.
ಅಮೆರಿಕದ ಪ್ರಜೆಯನ್ನು ಹತ್ಯೆಗೈಯಲು ಭಾರತ ಸರಕಾರದ ಅಧಿಕಾರಿಯೊಬ್ಬರು ನಿಖಿಲ್ ಗುಪ್ತಾನನ್ನು ನಿಯೋಜಿಸಿದ್ದರು ಎಂದು ಅಮೆರಿಕದ ಅಟಾರ್ನಿ ಕಚೇರಿ ಪ್ರಕಟಿಸಿರುವ ದೋಶಾರೋಪಣೆ ಪತ್ರವು ಆಪಾದಿಸಿದೆ.
ಆದರೆ ನಿಖಿಲ್ ಗುಪ್ತಾನ ಗುರಿ ಯಾರಾಗಿದ್ದರೆಂದು ಅಮೆರಿಕದ ಪ್ರಾಸಿಕ್ಯೂಟರ್ ಹೆಸರಿಸಿಲ್ಲವಾದರೂ, ಅದು ಅಮೆರಿಕದಲ್ಲಿ ನೆಲೆಸಿರುವ ಖಾಲಿಸ್ತಾನ್ ಪರ ತೀವ್ರವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಆಗಿರಬೇಕೆಂದು ಮೂಲಗಳು ತಿಳಿಸಿವೆ.
ಹತ್ಯೆಯ ಸಂಚನ್ನು ನಿರ್ದೇಶಿಸಿದ ಭಾರತೀಯ ಅಧಿಕಾರಿಯನ್ನು ದೋಷಾರೋಪಣೆ ಪತ್ರದಲ್ಲಿ ಸಿಸಿ-1 ಎಂದು ಹೆಸರಿಸಲಾಗಿದೆ.
ಸಿಸಿ-1 ಅಧಿಕಾರಿಯು ಭದ್ರತಾ ನಿರ್ವಹಣೆ ಹಾಗೂ ಬೇಹುಗಾರಿಕೆಯ ಹೊಣೆಗಾರಿಕೆಗಳನ್ನು ಹೊಂದಿದ ಹಿರಿಯ ಕ್ಷೇತ್ರೀಯ ಅಧಿಕಾರಿ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ದೋಷಾರೋಪಣೆ ಪತ್ರದಲ್ಲಿ ಹೇಳಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲೂ ಆತ ಈ ಮೊದಲು ಕಾರ್ಯನಿರ್ವಹಿಸಿದ್ದು, ಸಮರ ಕಲೆ ಹಾಗೂ ಶಸ್ತ್ರಾಸ್ತ್ರಗಳಲ್ಲಿ ತರಬೇತಿ ನೀಡುವ ಅಧಿಕಾರಿಯೂ ಆಗಿ ಕಾರ್ಯನಿರ್ವಹಿಸಿದ್ದರೆಂದು ಹೇಳಿಕೆ ತಿಳಿಸಿದೆ.
ಸಿಸಿ-1 ಅಧಿಕಾರಿಯು ಭಾರತದಿಂದಲೇ ಹತ್ಯೆಯ ಸಂಚನ್ನು ನಿರ್ದೇಶಿಸಿದ್ದರೆಂದು ದೋಷಾರೋಪಣೆ ಪತ್ರದಲ್ಲಿ ಹೇಳಲಾಗಿದೆ.
2023ರ ಮೇನಲ್ಲಿ ಸಿಸಿ-1 ಅಧಿಕಾರಿಯು ಗುಪ್ತಾನನ್ನು, ಖಾಲಿಸ್ತಾನ್ ಪರವಾಗಿರುವ ಅಮೆರಿಕ ಪ್ರಜೆಯ ಹತ್ಯೆಗೆ ನಿರ್ದೇಶನ ನೀಡಿದ್ದನು. ಈ ಹಿನ್ನೆಲೆಯಲ್ಲಿ ನಿಖಿಲ್ ಗುಪ್ತಾ ತನ್ನ ಕ್ರಿಮಿನಲ್ ಸಹವರ್ತಿಯನ್ನು ಸಂಪರ್ಕಿಸಿದ್ದ. ನ್ಯೂಯಾರ್ಕ್ನಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ಹತ್ಯೆಗೈಯಲು ಶೂಟರ್ನನ್ನು ಗೊತ್ತುಪಡಿಸಲು ಗುಪ್ತಾ ಆತನನ್ನು ಸಂಪರ್ಕಿಸಿದ್ದನು. ಆದರೆ ಆ ಕ್ರಿಮಿನಲ್ ವಾಸ್ತವಿಕವಾಗಿ ಅಮೆರಿಕದ ಮಾದಕದ್ರವ್ಯ ನಿಯಂತ್ರಣ ಇಲಾಖೆ (ಡಿಇಎ)ಯ ಮಾಹಿತಿದಾರನಾಗಿದ್ದನು. ಇದರಿಂದಾಗಿ ಹತ್ಯೆಯ ಸಂಚು ಬಯಲಾಯಿತೆನ್ನಲಾಗಿದೆ.