ಎರಡೂ ಕೈಗಳನ್ನು ಕಳೆದುಕೊಂಡ ನಿವೃತ್ತ ಮುಖ್ಯೋಪಾಧ್ಯಾಯರಿಗೆ ಕಾನೂನು ಸಡಿಲಿಸಿ ಪಾಸ್ ಪೋರ್ಟ್ ವಿತರಣೆ

Update: 2024-03-07 11:34 GMT
ಕೆ ಸುಂದರ (Photo credit: newindianexpress.com)

ಬೆಂಗಳೂರು: ದುರ್ಘಟನೆಯೊಂದರಲ್ಲಿ ತಮ್ಮೆರಡೂ ಕೈಗಳನ್ನು ಕಳೆದುಕೊಂಡಿರುವ ಮಂಗಳೂರು ಮೂಲದ ನಿವೃತ್ತ ಮುಖ್ಯೋಪಾಧ್ಯಾಯ ಕೆ ಸುಂದರ ಎಂಬವರಿಗೆ ಪಾಸ್‌ಪೋರ್ಟ್‌ ಪಡೆಯಲು ಕಡ್ಡಾಯ ಫಿಂಗರ್‌ ಪ್ರಿಂಟ್‌ ಬಯೋಮೆಟ್ರಿಕ್‌ ಅನ್ನು ದೃಢೀಕರಣ ಉದ್ದೇಶಗಳಿಗಾಗಿ ನೀಡುವುದರಿಂದ ರಾಜ್ಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ವಿನಾಯಿತಿ ನೀಡಿರುವುದರಿಂದ ಅವರು ಪಾಸ್‌ಪೋರ್ಟ್‌ ಪಡೆಯುವಂತಾಗಿದೆ.

ಸುಮಾರು ಎಂಟು ವರ್ಷಗಳ ಹಿಂದೆ ಮಗಳ ನಿಶ್ಚಿತಾರ್ಥದ ಗಡಿಬಿಡಿಯಲ್ಲಿ ಸುಂದರ್ ಕಬ್ಬಿಣದ ದೋಟಿ (ಉದ್ಧದ ಕೋಲು) ಬಳಸಿ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಕಬ್ಬಿಣದ ದೋಟಿ ಪಕ್ಕದಲ್ಲೇ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ತಗುಲಿ ಸುಂದರ್ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ನಂತರದ ದಿನಗಳಲ್ಲಿ ಕೃತಕ ಕೈಗಳನ್ನು ಅಳವಡಿಸಿಕೊಂಡು ಸುಂದರ್ ತನ್ನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಲಿತರು.

ಸುಂದರ್ ಅವರ ಪುತ್ರ ಶಿವರಾಜ್ ದೂರದ ಫಿನ್ಲ್ಯಾಂಡ್ ದೇಶದಲ್ಲಿ ನೆಲೆಸಿದ್ದರು. ಶಿವರಾಜ್ ತನ್ನ ಹೆತ್ತವರನ್ನು ಅಲ್ಲಿಗೆ ಬರುವಂತೆ ಕೋರುತ್ತಿದ್ದರು. ಅಲ್ಲಿಗೆ ಹೋಗಿ ಬರಲು ಮನಸ್ಸಿದ್ದರೂ ಪಾಸ್ ಪೋರ್ಟ್ ಇಲ್ಲದೆ ಹೊರಡುವುದು ಅಸಾಧ್ಯವಾಗಿತ್ತು. ಪಾಸ್ ಪೋರ್ಟ್ ಹೊಂದಬೇಕೆಂದು ಅನಿಸಿದರೂ ಬೆರಳಚ್ಚು (ಬಯೋಮೆಟ್ರಿಕ್ಸ್) ನೀಡಲು ಅಸಮರ್ಥರಾಗಿರುವುದರಿಂದ ಸುಂದರ್ ಅರ್ಜಿಯನ್ನು ಸಲ್ಲಿಸಿರಲಿಲ್ಲ. ಒಂದೊಮ್ಮೆ ಮನಸ್ಸು ಬದಲಾಯಿಸಿ ಮೈಸೂರಿನ ಪಾಸ್ ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿದರು.

ಬೆಂಗಳೂರಿನ ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಶ್ರೀ ಕೃಷ್ಣ ಅರ್ಜಿದಾರರ ಅಸಹಾಯಕತೆಯನ್ನು ಅರಿತು ಈ ವಿಶೇಷ ಪ್ರಕರಣದ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಗಮನ ಸೆಳೆದರು. ಸಚಿವಾಲಯವು ಅರ್ಜಿದಾರ ಸುಂದರರ ಸಹಿ ಮತ್ತು ಕೈ ಬೆರಳಚ್ಚಿನ ಬದಲಿಗೆ ಕಾಲಿನ ಹೆಬ್ಬೆರಳಿನ ಅಚ್ಚು ಒತ್ತಿಸಿ ಪಾಸ್ ಪೋರ್ಟ್ ವಿತರಿಸಲು ಶೀಘ್ರ ಕ್ರಮ ವಹಿಸಿದೆ.

ಜನವರಿ 30ರಂದು ಮೊದಲು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಪತ್ನಿಗೆ ಪಾಸ್‌ಪೋರ್ಟ್‌ ದೊರೆತರೂ ತಮ್ಮ ಸಮಸ್ಯೆಯಿಂದಾಗಿ ದೊರೆತಿರಲಿಲ್ಲ, ಆದರೆ ಈಗ ಅಧಿಕಾರಿಗಳ ಸಹಾಯದಿಂದ ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಸುಂದರ ಅವರ ಪುತ್ರ ಶಿವರಾಜ್‌ ಫಿನ್‌ಲ್ಯಾಂಡ್‌ನಲ್ಲಿ ನೋಕಿಯಾ ಸೀಮನ್ಸ್‌ ಕಂಪೆನಿಯಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದಾರೆ.

ಕೃಪೆ: newindianexpress.com

ಅನುವಾದ: ರಾಜೇಂದ್ರ ಪೈ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News