ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ಜಗತ್ತಿನ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ್ದಾರೆ: ಝೆಲೆನ್ಸ್ಕಿ ವಾಗ್ದಾಳಿ
ಹೊಸದಿಲ್ಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ಜಗತ್ತಿನ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಾಗ್ದಾಳಿ ನಡೆಸಿದ್ದಾರೆ. ವ್ಲಾದಿಮಿರ್ ಪುಟಿನ್ ಹಾಗೂ ನರೇಂದ್ರ ಮೋದಿ ಭೇಟಿಯ ದಿನವೇ ರಷ್ಯಾ ದೇಶವು ಉಕ್ರೇನ್ ಮೇಲೆ ಮಾರಣಾಂತಿಕ ಕ್ಷಿಪಣಿ ದಾಳಿ ನಡೆಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ, "ಇಂಥ ದಿನದಂದೇ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ವಿಶ್ವದ ನೀಚ ಕ್ರಿಮಿನಲ್‌ನನ್ನು ಭೇಟಿ ಮಾಡಿರುವುದು ತೀವ್ರ ನಿರಾಶಾದಾಯಕ. ಇದರಿಂದ ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಭಾರಿ ಹಿನ್ನಡೆಯುಂಟಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ನೊಂದಿಗೆ ಅವರು ಕೀವ್‌ನ ಮಕ್ಕಳ ಆಸ್ಪತ್ರೆಯೊಂದರ ಮೇಲೆ ನಡೆಸಿದ ರಷ್ಯಾ ಕ್ಷಿಪಣಿ ದಾಳಿಯಲ್ಲಿ ಹತ್ತಾರು ಮಂದಿ ಮೃತಪಟ್ಟಿರುವ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ದೀರ್ಘಾಕಾಲದ ಸಂಬಂಧಗಳನ್ನು ಮರು ದೃಢೀಕರಿಸಲು ಪ್ರಧಾನಿ ನರೇಂದ್ರ ಮೋದಿ ಮಾಸ್ಕೊಗೆ ಭೇಟಿ ನೀಡಿದ್ದು, ಅವರ ಮಾಸ್ಕೊ ಭೇಟಿಯ ಎರಡನೆ ದಿನವಾದ ಇಂದು ಝೆಲೆನ್ಸ್ಕಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ರಷ್ಯಾ ಭೇಟಿಯ ಕುರಿತು ಅಮೆರಿಕ ಕೂಡಾ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯ ರಷ್ಯಾ ಭೇಟಿ ಬಗ್ಗೆ ಅಮೆರಿಕ ಕೂಡಾ ಅಸಮಾಧಾನಗೊಂಡಿದೆ.