ಲೋಕಸಭಾ ಚುನಾವಣೆ 2024 | ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸುವುದು ಹೇಗೆ?

Update: 2024-03-17 13:02 GMT

Photo : indiatoday

ಹೊಸದಿಲ್ಲಿ: 2024ರ ಸಾರ್ವತ್ರಿಕ ಚುನಾವಣೆಗಳು ಈಗಾಗಲೇ ಘೋಷಣೆಯಾಗಿವೆ. ಮತದಾನದ ಹಕ್ಕು ಈ ದೇಶದ ಪ್ರಜೆಗಳ ಮೂಲಭೂತ ಹಕ್ಕು. ತಮ್ಮ ಧ್ವನಿಯು ಮತಪೆಟ್ಟಿಗೆಯ ಮೂಲಕ ಕೇಳಲ್ಪಡುತ್ತದೆ ಎನ್ನುವುದನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯು ಖಚಿತಪಡಿಸಿಕೊಳ್ಳಬೇಕಿದೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆಗೊಂಡಿದೆ ಎನ್ನುವುದನ್ನು ಪರಿಶೀಲಿಸುವುದು ಈ ಮೂಲಭೂತ ಹಕ್ಕನ್ನು ಚಲಾಯಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಅದನ್ನು ಸೇರಿಸಲು ಈಗಲೂ ಅವಕಾಶವಿದೆ. ನಾಮಪತ್ರಗಳ ಸಲ್ಲಿಕೆಗೆ ಅಂತಿಮ ದಿನಾಂಕದ 10 ದಿನಗಳ ಇರುವವರೆಗೂ ಫಾರ್ಮ್ ನಂ 6ನ್ನು ಬಳಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು ಮತ್ತು ಫಾರ್ಮ್ ನಂ.8ನ್ನು ಬಳಸಿ ತಿದ್ದುಪಡಿಗಳನ್ನು ಮಾಡಬಹುದು.

ಅಲ್ಲದೆ, ಮಾ.31ಕ್ಕೆ 18 ವರ್ಷಗಳನ್ನು ಪೂರೈಸುವವರು, ಮುಂಚಿತವಾಗಿಯೇ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಅರ್ಹ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಚುನಾವಣಾ ಆಯೋಗಕ್ಕೆ ಈವರೆಗೆ ಇಂತಹ 50,000 ಅರ್ಜಿಗಳು ಸಲ್ಲಿಕೆಯಾಗಿವೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿಗಳು ಇಲ್ಲಿವೆ

ನಿಮ್ಮ ಅರ್ಹತೆಯನ್ನು ಪರಿಶೀಲಿಸಿ:

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮುಂದಾಗುವ ಮುನ್ನ ಅದಕ್ಕೆ ನೀವು ಅರ್ಹರೇ ಎನ್ನುವುದನ್ನು ಪರಿಶೀಲಿಸಿ. ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ವರ್ಷದ ಜ.1ರಂದು ನಿಮಗೆ 18 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಾಗಿರಬೇಕು. ನೀವು ಭಾರತೀಯ ಪ್ರಜೆಯಾಗಿದ್ದು, ಯಾವುದೇ ಕಾನೂನಿನಡಿ ಅನರ್ಹರಾಗಿರಬಾರದು.

ಆನ್‌ಲೈನ್ ನೋಂದಣಿ:

ಚುನಾವಣಾ ಆಯೋಗವು ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲು National Voters' Service Portal (NVSP)ವೆಬ್‌ಸೈಟ್‌ ಗೆ ಭೇಟಿ ನೀಡಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೋಟರ್ ಹೆಲ್ಪ್‌ಲೈನ್ (ಮತದಾರರ ಸಹಾಯವಾಣಿ) ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಅರ್ಜಿ ಸಲ್ಲಿಕೆ:

ಮತದಾರರ ಪಟ್ಟಿಯಲ್ಲಿ ನಿಮ್ಮಹೆಸರು ಸೇರಿಸಲು ಆನ್‌ಲೈನ್ ಫಾರ್ಮ್ 6ನ್ನು ಭರ್ತಿ ಮಾಡಿ. ಹೆಸರು, ಜನ್ಮದಿನಾಂಕ, ವಿಳಾಸದಂತಹ ನಿಖರವಾದ ವೈಯಕ್ತಿಕ ವಿವರಗಳನ್ನು ಒದಗಿಸಿ ಮತ್ತು ಅಗತ್ಯವಿರುವ ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ದಾಖಲೆಗಳ ಪರಿಶೀಲನೆ:

ನೋಂದಣಿ ಪ್ರಕ್ರಿಯೆ ಸಂದರ್ಭ ಅಪ್‌ಲೋಡ್ ಮಾಡಲಾದ ಎಲ್ಲ ದಾಖಲೆಗಳು ಮಾನ್ಯವಾಗಿವೆ ಮತ್ತು ಅಪ್-ಟು-ಡೇಟ್ ಆಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಸ್ವೀಕರಿಸಲಾಗುವ ದಾಖಲೆಗಳು ಆಧಾರ್ ಕಾರ್ಡ್,ಪಾನ್ ಕಾರ್ಡ್,ಪಾಸ್‌ಪೋರ್ಟ್,ಡ್ರೈವಿಂಗ್ ಲೈಸನ್ಸ್ ಅಥವಾ ಸರಕಾರವು ವಿತರಿಸಿರುವ ಇತರ ಯಾವುದೇ ಗುರುತಿನ ಚೀಟಿಯನ್ನು ಒಳಗೊಂಡಿವೆ.

ಸ್ಥಳ ಪರಿಶೀಲನೆ:

ನೀವು ಅರ್ಜಿಯನ್ನು ಸಲ್ಲಿಸಿದ ಬಳಿಕ ನೀವು ಒದಗಿಸಿರುವ ಮಾಹಿತಿಗಳನ್ನು ಪರಿಶೀಲಿಸಲು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಸ್ಥಳ ಪರಿಶೀಲನೆಯನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ನೀವು ಅದೇ ವಿಳಾಸದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ.

ಅರ್ಜಿಯ ಸ್ಥಿತಿಗತಿ ಪರಿಶೀಲಿಸಿ:

National Voters' Service Portal (NVSP) ವೆಬ್‌ಸೈಟ್ ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಿ. ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಸಹಾಯ ಅಥವಾ ಪ್ರಶ್ನೆಗಳಿಗಾಗಿ ನೀವು ಚುನಾವಣಾ ಆಯೋಗದ ಸಹಾಯವಾಣಿಯನ್ನೂ ಸಂಪರ್ಕಿಸಬಹುದು.

ತಿದ್ದುಪಡಿ ಮತ್ತು ನವೀಕರಣಗಳು:

ನಿಮ್ಮ ಮತದಾರರ ಮಾಹಿತಿಗಳಲ್ಲಿ ಯಾವುದೇ ದೋಷಗಳಿದ್ದರೆ ಅಥವಾ ಬದಲಾವಣೆಗಳನ್ನು ಮಾಡಬೇಕಿದ್ದರೆ ಅಗತ್ಯ ಫಾರ್ಮ್‌ಗಳನ್ನು ತುಂಬಬೇಕಾಗುತ್ತದೆ. ತಿದ್ದುಪಡಿಗಳಿಗಾಗಿ ಫಾರ್ಮ್ 8 ಅಥವಾ ಅದೇ ಮತಕ್ಷೇತ್ರದೊಳಗೆ ವಿಳಾಸ ಬದಲಾವಣೆಗಾಗಿ ಫಾರ್ಮ್ 8ಎ ಅನ್ನು ಬಳಸಬಹುದು.

ಭೌತಿಕ ದಾಖಲಾತಿ ಕೇಂದ್ರಗಳು:

ನೀವು ಸಾಂಪ್ರದಾಯಿಕ ವಿಧಾನವನ್ನು ಬಯಸುತ್ತೀರಾದರೆ ನಿಮ್ಮ ಅರ್ಜಿಯನ್ನು ಭೌತಿಕವಾಗಿ ಸಲ್ಲಿಸಲು ಸಮೀಪದ ಮತದಾರರ ಪಟ್ಟಿ ನೋಂದಣಿ ಅಧಿಕಾರಿ (ಇಆರ್‌ಒ)ಗಳ ಕಚೇರಿ ಅಥವಾ ವೋಟರ್ ಫೆಸಿಲಿಟೇಷನ್ ಸೆಂಟರ್ (ಮತದಾರರ ಸೌಲಭ್ಯ ಕೇಂದ್ರ)ಗೆ ಭೇಟಿ ನೀಡಬಹುದು.

ಅಂತಿಮ ದಿನಾಂಕದ ಬಗ್ಗೆ ಅರಿವಿರಲಿ:

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಂತಿಮ ಗಡುವನ್ನು ಗಮನದಲ್ಲಿಟ್ಟುಕೊಳ್ಳಿ. ಸಾಮಾನ್ಯವಾಗಿ ಮತದಾನ ದಿನಕ್ಕಿಂತ ಕೆಲವು ವಾರಗಳ ಮೊದಲು ಈ ದಿನಾಂಕ ನಿಗದಿಯಾಗಿರುತ್ತದೆ. ಈ ದಿನಾಂಕವನ್ನು ತಪ್ಪಿಸಿಕೊಂಡರೆ ಮುಂಬರುವ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗುತ್ತೀರಿ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News