ಅಗ್ಗದ ದರದ ʼಏರ್ ಕೇರಳʼಕ್ಕೆ ನಾಗರಿಕ ವಾಯುಯಾನ ಸಚಿವಾಲಯದ ʼಗ್ರೀನ್‌ ಸಿಗ್ನಲ್ʼ

Update: 2024-07-10 15:38 GMT

Photo: businesstoday.in

ಹೊಸದಿಲ್ಲಿ: ನಾಗರಿಕ ವಾಯುಯಾನ ಸಚಿವಾಲಯವು ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಕೇರಳಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ)ವನ್ನು ವಿತರಿಸಿದೆ.

ದುಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಕಂಪನಿಯು ಈ ವಿಷಯವನ್ನು ಪ್ರಕಟಿಸಿದೆ. ದುಬೈ ಉದ್ಯಮಿಗಳಾದ ಅಫಿ ಮುಹಮ್ಮದ್ ಮತ್ತು ಅಯೂಬ್ ಕಲ್ಲಡ ಅವರು ಪ್ರವರ್ತಿಸಿರುವ ʼಏರ್ ಕೇರಳʼ ಕೇರಳದ ಮೊದಲ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಲಿದೆ.

ಖಲೀಜ್ ಟೈಮ್ಸ್ ವರದಿಯ ಪ್ರಕಾರ ಝೆಟ್‌ಫೈ ಏವಿಯೇಷನ್ ಹೆಸರಿನಲ್ಲಿ ನೋಂದಣಿಯಾಗಿರುವ ವಿಮಾನಯಾನ ಸಂಸ್ಥೆಯು ಮೂರು ವರ್ಷಗಳ ಅವಧಿಗೆ ಪ್ರಯಾಣಿಕ ವಿಮಾನಯಾನ ಸೇವೆಗಳನ್ನು ನಿರ್ವಹಿಸಲು ಅನುಮತಿಯನ್ನು ಹೊಂದಿದೆ.

ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಅಹ್ಮದ್,‘ಇದು ನಮ್ಮ ವರ್ಷಗಳ ಕಠಿಣ ಪರಿಶ್ರಮದ ಫಲವಾಗಿದೆ. ಇದನ್ನು ಸಾಕಾರಗೊಳಿಸಲು ನಾನು ಮತ್ತು ನನ್ನ ಪಾಲುದಾರರು ಅವಿರತವಾಗಿ ಶ್ರಮಿಸುತ್ತಿದ್ದೇವೆ. ಹಲವಾರು ಜನರು ನಮ್ಮನ್ನು ಪ್ರಶ್ನಿಸಿದ್ದರು ಮತ್ತು ನಮ್ಮ ಕನಸು ನನಸಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಾವು ಇನ್ನೂ ಬಹಳ ದೂರ ಸಾಗಬೇಕಿದೆ,ಆದರೆ ಎನ್‌ಒಸಿ ನಮ್ಮ ಪಾಲಿಗೆ ದೊಡ್ಡ ಹೆಜ್ಜೆಯಾಗಿದೆ ’ ಎಂದರು.

ಸ್ಮಾರ್ಟ್ ಟ್ರಾವೆಲ್ಸ್ ಏಜನ್ಸಿಯ ಸಂಸ್ಥಾಪಕರಾಗಿರುವ ಅಹ್ಮದ್ ಕಳೆದ ವರ್ಷ ‘ಏರ್‌ಕೇರಳ ಡಾಟ್ ಕಾಮ್’ ಡೊಮೇನ್ ಹೆಸರಿಗಾಗಿ 10 ಲಕ್ಷ ದಿರಹಮ್‌ಗಳ ಭಾರೀ ಮೊತ್ತವನ್ನು ಸ್ಥಳೀಯ ಕಂಪನಿಯೊಂದಕ್ಕೆ ಪಾವತಿಸಿದ್ದರು. ಇದರೊಂದಿಗೆ ಅವರು 2005ರಲ್ಲಿ ಕೇರಳ ಸರಕಾರವು ಮೊದಲು ಪ್ರಸ್ತಾವಿಸಿದ್ದ ಯೋಜನೆಯ ಬಗ್ಗೆ ಮತ್ತೆ ಭರವಸೆಯನ್ನು ಮೂಡಿಸಿದ್ದರು.

ವರದಿಗಳ ಪ್ರಕಾರ ಏರ್ ಕೇರಳ 2025ರಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಲು ಉದ್ದೇಶಿಸಿದೆ. ಕಂಪನಿಯು ಆರಂಭದಲ್ಲಿ ಮೂರು ಎಟಿಆರ್ 72-600 ವಿಮಾನಗಳ ಮೂಲಕ ಎರಡು ಮತ್ತು ಮೂರನೇ ದರ್ಜೆಯ ನಗರಗಳಿಗೆ ಸೇವೆಯನ್ನು ಒದಗಿಸಲಿದೆ.

‘ನಮ್ಮ ಮುಂದಿನ ಹೆಜ್ಜೆಗಳು ವಿಮಾನ ಸ್ವಾಧೀನ ಮತ್ತು ಏರ್ ಆಪರೇಟರ್ಸ್ ಸರ್ಟಿಫಿಕೇಟ್(ಎಒಸಿ) ಪಡೆದುಕೊಳ್ಳುವುದನ್ನು ಒಳಗೊಂಡಿವೆ. ಇದು ಪ್ರಮುಖ ಹಂತವಾಗಿದ್ದು,ವಾಯುಯಾನ ಅಧಿಕಾರಿಗಳು ನಿಗದಿಗೊಳಿಸಿರುವ ಎಲ್ಲ ಸುರಕ್ಷತಾ ಮತ್ತು ಕಾರ್ಯಾಚರಣೆ ಮಾನದಂಡಗಳನ್ನು ನಾವು ಪೂರೈಸುವುದನ್ನು ಖಚಿತಪಡಿಸುತ್ತದೆ ’ಎಂದು ಅಯೂಬ್ ಕಲ್ಲಡ ತಿಳಿಸಿದರು.

‘ಕಂಪನಿಯು ವಿಮಾನ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಿದೆ ಮತ್ತು ಲೀಸ್ ನಲ್ಲಿ ಪಡೆಯುವ ಹಾಗೂ ತಯಾರಕರಿಂದ ನೇರ ಖರೀದಿಯ ಮೂಲಕ ವಿಮಾನವನ್ನು ಹೊಂದುವ ಎರಡೂ ಆಯ್ಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ’ಎಂದರು.

ಏರ್ ಕೇರಳ ಅಂತರರಾಷ್ಟ್ರೀಯ ಯಾನಗಳನ್ನು ಆರಂಭಿಸುವ ಮುನ್ನ ಪ್ರಾದೇಶಿಕ ಕಾರ್ಯಾಚರಣೆಗಳನ್ನು ನಡೆಸಬೇಕಾಗುತ್ತದೆ.

‘ನಾವು ಎರಡು ಮತ್ತು ಮೂರನೇ ದರ್ಜೆಯ ನಗರಗಳನ್ನು ಮೊದಲ ದರ್ಜೆಯ ನಗರಗಳು ಮತ್ತು ಮೆಟ್ರೋ ವಿಮಾನ ನಿಲ್ದಾಣಗಳೊಂದಿಗೆ ಸಂಪರ್ಕಿಸಲು ಯೋಜಿಸಿದ್ದೇವೆ ’ಎಂದೂ ಅವರು ತಿಳಿಸಿದರು.

ತನ್ನ ವಿಮಾನಗಳ ಸಂಖ್ಯೆ 20ಕ್ಕೆ ತಲುಪಿದಾಗ ಕಂಪನಿಯು ಅಂತರರಾಷ್ಟ್ರೀಯ ಯಾನಗಳನ್ನು ಆರಂಭಿಸಲಿದೆ. ‘ದುಬೈ ನಮ್ಮ ಮೊದಲ ಅಂತರರಾಷ್ಟ್ರೀಯ ಯಾನಗಳಲ್ಲಿ ಒಂದಾಗಿರಲಿದೆ. ನಮ್ಮ ಯೋಜನೆಗೆ ಅಂದಾಜು 11 ಕೋ.ದಿರಹಮ್‌ಗಳ ಆರಂಭಿಕ ಬಂಡವಾಳ ಹೂಡಿಕೆಯ ಅಗತ್ಯವಿದೆ’ ಎಂದು ಅಫಿ ಅಹ್ಮದ್ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News