ಮಧ್ಯಪ್ರದೇಶ: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ವರ್ತಿಸಿದ್ದ ಆರೋಪಿಗಳಿಬ್ಬರ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

Update: 2023-07-29 10:00 GMT

Video screengrab

ಭೋಪಾಲ್: ಮಧ್ಯಪ್ರದೇಶದಲ್ಲಿ ಪ್ರಸಿದ್ದ ದೇವಾಲಯವೊಂದರ ಸಮೀಪ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ವರ್ತಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಇಬ್ಬರು ಆರೋಪಿಗಳ ಮನೆಗಳನ್ನು ಸ್ಥಳೀಯ ಆಡಳಿತ ಶನಿವಾರ ಕೆಡವಿ ಹಾಕಿದೆ. ಆರೋಪಿಗಳಿಬ್ಬರ ಮನೆಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಆರೋಪಿಗಳನ್ನು ರವೀಂದ್ರ ಚೌಧರಿ ಹಾಗೂ ಅತುಲ್ ಬಧೌಲಿಯಾ ಎಂದು ಗುರುತಿಸಲಾಗಿದ್ದು, ಸತ್ನಾ ಜಿಲ್ಲೆಯ ಮೈಹಾರ್ ಪಟ್ಟಣದ ಪ್ರಸಿದ್ಧ ದೇವಸ್ಥಾನವನ್ನು ನಿರ್ವಹಿಸುವ ಟ್ರಸ್ಟ್ ನಲ್ಲಿ ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ.

ಅತ್ಯಾಚಾರ ಘಟನೆ ಮುನ್ನೆಲೆಗೆ ಬಂದ ನಂತರ  ಟ್ರಸ್ಟ್ ಸಮಿತಿಯು ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿದೆ.

ರಾಜ್ಯದ ವಿದಿಶಾ ಜಿಲ್ಲೆಯ ಉದಯಪುರದಲ್ಲಿರುವ ರವೀಂದ್ರನ ಮನೆ ಹಾಗೂ ನ್ಯೂ ಬಸ್ತಿಯ ಮಲಿಯನ್ ತೋಲಾದಲ್ಲಿ ಅತುಲ್ ಮನೆಯನ್ನು ನೆಲಸಮಗೊಳಿಸಲಾಗಿದೆ. ಧ್ವಂಸ ಕಾರ್ಯ ನಡೆಯುತ್ತಿರುವಾಗ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆದಿರುವುದಲ್ಲದೆ ಅನೇಕ ಬಾರಿ ಕಚ್ಚಲಾಗಿದ್ದು, ಇಬ್ಬರು ಆರೋಪಿಗಳು ಬಾಲಕಿಯೊಂದಿಗೆ ಕ್ರೂರವಾಗಿ ವರ್ತಿಸಿದ್ದರು. ಘಟನೆಯ ನಂತರ ಇಬ್ಬರನ್ನು ಬಂಧಿಸಲಾಯಿತು. ಘಟನೆ ಗುರುವಾರ ನಡೆದಿದೆ.

ಇಬ್ಬರೂ ಆರೋಪಿಗಳು ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಕ್ಕೆ ಗಟ್ಟಿಯಾದ ವಸ್ತುವನ್ನು ತುರುಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಆದರೆ ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರವೇ ಇದನ್ನು ದೃಢೀಕರಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ವೈದ್ಯಕೀಯ ಆರೈಕೆಗಾಗಿ ವಿಭಾಗೀಯ ಪ್ರಧಾನ ಕಛೇರಿ ರೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ನಂತರ, ಮೈಹಾರ್ ಮುನ್ಸಿಪಲ್ ಕೌನ್ಸಿಲ್ ನ ಮುಖ್ಯ ಮುನ್ಸಿಪಲ್ ಅಧಿಕಾರಿ ಶುಕ್ರವಾರ ಇಬ್ಬರ ಕುಟುಂಬಗಳಿಗೆ ಅವರ ಜಮೀನು ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೋರಿ ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಿಗಳಿಬ್ಬರ ಮನೆಗಳು ಅಕ್ರಮವಾಗಿ ಕಟ್ಟಲಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ (ಎಸ್ಡಿಒಪಿ) ಲೋಕೇಶ್ ದಬರ್ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಧ್ವಂಸಗೈಯ್ಯಲು ತಂಡವು ಅತುಲ್ ಭಡೋಲಿಯಾ ಮನೆಗೆ ತಲುಪಿದಾಗ, ಆತನ ಕುಟುಂಬ ಸದಸ್ಯರು ತನಿಖೆ ಪೂರ್ಣಗೊಂಡ ನಂತರವೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ವಿನಂತಿಸಿದರು. ಆದರೆ ಅಧಿಕಾರಿಗಳು ಇದಕ್ಕೆ ಕಿವಿಗೊಡದ ಮನೆ ಕೆಡವಲು ಮುಂದಾದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News