ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ; ಈಡಿ ಯಿಂದ ಮತ್ತೆ ಇಬ್ಬರ ಬಂಧನ

Update: 2024-01-13 15:49 GMT

ರಾಯಪುರ : ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ಆ್ಯಪ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯ ತನಿಖೆಗೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ನಿತಿನ್ ಟಿಬ್ರೆವಾಲ್ ಹಾಗೂ ಅಮಿತ್ ಅಗ್ರವಾಲ್ ಎಂದು ಗುರುತಿಸಲಾಗಿದೆ. ಇವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಲಾಗಿದೆ ಹಾಗೂ ರಾಯಪುರದ ವಿಶೇಷ ನ್ಯಾಯಾಲಯದ ಮುಂದೆ ಹಾಜರಪಡಿಸಲಾಗಿದೆ. ನ್ಯಾಯಾಲಯ ಅವರನ್ನು ಜನವರಿ 17ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.

ಟಿಬ್ರೆವಾಲ್ ಪ್ರಕರಣದ ಆರೋಪಿ ವಿಕಾಸ್ ಚಪ್ಪಾರಿಯಾನ ನಿಕಟ ಸಹವರ್ತಿ ಎಂದು ಆರೋಪಿಸಲಾಗಿದೆ. ಟಿಬ್ರೆವಾಲ್ ದುಬೈಯಲ್ಲಿ ಬಹಿರಂಗಪಡಿಸದ ಕೆಲವು ಸೊತ್ತುಗಳನ್ನು ಖರೀದಿಸಿದ್ದಾನೆ. ಚಪ್ಪಾರಿಯಾ ಕೂಡ ಪಾಲುದಾರನಾದ ಕಂಪೆನಿಯಲ್ಲಿ ಈತ ಪ್ರಮುಖ ಪಾಲುದಾರನಾಗಿದ್ದ ಎಂದು ಜಾರಿ ನಿರ್ದೇಶನಾಲಯದ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಹಾದೇವ್ ಆ್ಯಪ್ನಿಂದ ಗಳಿಸಿದ ‘ಅಪರಾಧದ ಆದಾಯ’ವನ್ನು ಬಳಸಿ ಈತ ಸೊತ್ತು ಖರೀದಿಸಿದ್ದಾನೆ ಎಂದು ಸುದ್ದಿ ಸಂಸ್ಥೆ ಶಂಕಿಸಿದೆ. ಪ್ರಕರಣದ ಇನ್ನೋರ್ವ ಆರೋಪಿ ಅಮಿತ್ ಅಗ್ರವಾಲ್. ಈತ ಪ್ರಕರಣದ ಇನ್ನೋರ್ವ ಆರೋಪಿ ಅನಿಲ್ ಕುಮಾರ್ ಅಗ್ರವಾಲ್ನ ಸಂಬಂಧಿ.

ಅಮಿತ್ ಅಗ್ರವಾಲ್ ಮಹಾದೇವ್ ಆ್ಯಪ್ನ ನಿಧಿಯನ್ನು ಅನಿಲ್ ಕುಮಾರ್ ಅಗ್ರವಾಲ್ನಿಂದ ಸ್ವೀಕರಿಸಿದ್ದಾನೆ. ಆತನ ಪತ್ನಿ (ಅಮಿತ್ ಅಗ್ರವಾಲ್) ಪ್ರಕರಣದ ಇನ್ನೋರ್ವ ಆರೋಪಿ ಅನಿಲ್ ದಮ್ಮಾನಿಯೊಂದಿಗೆ ಸೇರಿ ಹಲವು ಸೊತ್ತುಗಳನ್ನು ಖರೀದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News