ಮಹಾರಾಷ್ಟ್ರ ಭೂಕುಸಿತ ಘಟನೆ: 86 ಮಂದಿ ಇನ್ನೂ ನಾಪತ್ತೆ; ಮುಂದುವರಿದ ಶೋಧ ಕಾರ್ಯ
ರಾಯಗಢ (ಮಹಾರಾಷ್ಟ್ರ): ಕನಿಷ್ಠ ಪಕ್ಷ 22 ಮಂದಿಯನ್ನು ಬಲಿ ತೆಗೆದುಕೊಂಡಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲ್‌ವಾಡಿ ಹ್ಯಾಮ್ಲೆಟ್ ಗ್ರಾಮದಲ್ಲಿ ಸಂಭವಿಸಿದ ಭಾರಿ ಭೂಕುಸಿತ ಪ್ರದೇಶದಲ್ಲಿ, ಭೂಕುಸಿತ ಸಂಭವಿಸಿದ ಮೂರನೆಯ ದಿನವಾದ ಶನಿವಾರದಂದು ಶೋಧ ಕಾರ್ಯಾಚರಣೆ ಪುನಾರಂಭವಾಗಿದ್ದು, ಇನ್ನೂ 86 ಮಂದಿ ಗ್ರಾಮಸ್ಥರನ್ನು ಪತ್ತೆ ಹಚ್ಚಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಮುಂಬೈನಿಂದ 80 ಕಿಮೀ ದೂರದಲ್ಲಿರುವ ಖಾಲಾಪುರ ತಾಲ್ಲೂಕಿನ ಬೆಟ್ಟದ ಇಳಿಜಾರಿನಲ್ಲಿರುವ ಆದಿವಾಸಿಗಳ ಗ್ರಾಮದಲ್ಲಿ ಬುಧವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿತ್ತು.
ಗುರುವಾರ ಸಂಜೆಯವರೆಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16 ಇದ್ದದ್ದು, ಶುಕ್ರವಾರ ಮತ್ತೆ ಆರು ಮೃತದೇಹಗಳು ಪತ್ತೆಯಾದ ನಂತರ 22ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ ಒಂಬತ್ತು ಮಂದಿ ಪುರುಷರು, ಅಷ್ಟೇ ಸಂಖ್ಯೆಯ ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಸೇರಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಒಂಬತ್ತು ಮಂದಿ ಸದಸ್ಯರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಇನ್ನಿತರ ಸರ್ಕಾರಿ ಸಂಸ್ಥೆಗಳು ನಡೆಸುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಮೂರನೆಯ ದಿನವಾದ ಶನಿವಾರ ಬೆಳಗ್ಗೆ ಪುನಾರಂಭಗೊಂಡಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಶುಕ್ರವಾರ ಸಂಜೆ ಸುಮಾರು ಆರು ಗಂಟೆಗೆ ಶೋಧ ಕಾರ್ಯವನ್ನು ಅಮಾನತುಗೊಳಿಸಲಾಗಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಹಾಗೂ ಇನ್ನಿತರ ಸಂಸ್ಥೆಗಳು ಇಂದು (ಶನಿವಾರ) ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆಯನ್ನು ಪುನಾರಂಭಿಸಿವೆ" ಎಂದೂ ಅವರು ತಿಳಿಸಿದ್ದಾರೆ.
ಗ್ರಾಮದಲ್ಲಿನ 48 ಮನೆಗಳ ಪೈಕಿ, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿದ್ದ ಕನಿಷ್ಠ 17 ಮನೆಗಳು ಭೂಕುಸಿತದ ಅವಶೇಷಗಳಡಿ ಸಂಪೂರ್ಣವಾಗಿ ಅಥವಾ ಭಾಗಶಃ ನೆಲಸಮವಾಗಿವೆ.
ರಾಯಗಢ ವಿಪತ್ತು ನಿರ್ವಹಣಾ ಕಚೇರಿಯ ಪ್ರಕಾರ, 229 ಮಂದಿ ಗ್ರಾಮಸ್ಥರ ಪೈಕಿ 22 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. 111 ಮಂದಿ ಸುರಕ್ಷಿತವಾಗಿದ್ದು, ಉಳಿದ 86 ಮಂದಿ ಗ್ರಾಮಸ್ಥರನ್ನು ಇನ್ನೂ ಪತ್ತೆ ಹಚ್ಚಬೇಕಿದೆ.
ಆದರೆ, ಘಟನೆ ನಡೆದ ಸಂದರ್ಭದಲ್ಲಿ ಈ ಪೈಕಿ ಕೆಲವರು ವಿವಾಹ ಸಮಾರಂಭವೊಂದದಲ್ಲಿ ಭಾಗವಹಿಸಲು ಗ್ರಾಮ ತೊರೆದಿದ್ದರೆ, ಮತ್ತೆ ಕೆಲವರು ಭತ್ತದ ಗದ್ದೆಯಲ್ಲಿ ಕೆಲಸ ನಿರ್ವಹಿಸಲು ತೆರಳಿದ್ದರು.
ಶುಕ್ರವಾರ ಹೊರತೆಗೆಯಲಾಗಿರುವ ಸಂತ್ರಸ್ತರ ಮೃತದೇಹಗಳ ಪೈಕಿ ಮೂರು ಮಂದಿ ಪುರುಷರು ಹಾಗೂ ಮೂರು ಮಂದಿ ಮಹಿಳೆಯರಾಗಿದ್ದಾರೆ. ಮೃತರ ಪೈಕಿ ಆರು ತಿಂಗಳಿನಿಂದ ನಾಲ್ಕು ವರ್ಷ ವಯೋಮಾನದ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಕುಟುಂಬದ ಒಂಬತ್ತು ಮಂದಿ ಸದಸ್ಯರು ಮೃತಪಟ್ಟಿರುವ ಘಟನೆಯಲ್ಲಿ ಮೂರು ವರ್ಷದ ಬಾಲಕ ಹಾಗೂ ಆತನ ಆರು ತಿಂಗಳು ಪ್ರಾಯದ ತಂಗಿಯೂ ಸೇರಿದ್ದಾಳೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯಲ್ಲಿ ಮೂರು ಜಾನುವಾರುಗಳೂ ಮೃತಪಟ್ಟಿದ್ದು, 21 ಜಾನುವಾರುಗಳನ್ನು ರಕ್ಷಿಸಲಾಗಿದೆ.
ಬೆಟ್ಟದ ತಳದಿಂದ ಇರ್ಶಲ್‌ವಾಡಿ ಗ್ರಾಮವನ್ನು ತಲುಪಲು ಸುಮಾರು ಒಂದೂವರೆ ಗಂಟೆ ತಗುಲುತ್ತದೆ.
ಇರ್ಶದ್‌ಗಢ ಕೋಟೆಯನ್ನು ಹಿನ್ನೆಲೆಯಾಗಿ ಹೊಂದಿರುವ ಇರ್ಶಲ್‌ವಾಡಿ ಗ್ರಾಮವು ಜನಪ್ರಿಯ ಚಾರಣ ತಾಣವಾಗಿದ್ದು, ಇಲ್ಲಿ ಪಕ್ಕಾ ರಸ್ತೆಯನ್ನು ನಿರ್ಮಿಸಲಾಗಿಲ್ಲ. ಇದರಿಂದಾಗಿ ಅರ್ತ್ ಮೂವರ್ಸ್ ಹಾಗೂ ಎಕ್ಸ್‌ಕವೇಟರ್‌ಗಳು ಸರಾಗವಾಗಿ ಚಲಿಸಲು ಸಾಧ್ಯವಿಲ್ಲ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮನುಷ್ಯರನ್ನು ಬಳಸಿಕೊಂಡು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದುಕುಳಿದಿರುವವರಿಗೆ ಪುನರ್ವಸತಿ ಕಲ್ಪಿಸಲು 60 ಶಿಬಿರಗಳಿಗೆ ಬೇಡಿಕೆ ಬಂದಿದ್ದು, ಈ ಪೈಕಿ 40 ಶಿಬಿರಗಳು ಈಗಾಗಲೇ ಸ್ಥಳವನ್ನು ತಲುಪಿವೆ ಎಂದು ಶುಕ್ರವಾರ ಕೊಂಕಣ ವಲಯದ ಉಪ ಪ್ರಚಾರ ನಿರ್ದೇಶಕರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ, ಸ್ಥಳದಲ್ಲಿ 20 ತಾತ್ಕಾಲಿಕ ಶೌಚಾಲಯಗಳು ಹಾಗೂ ಅಷ್ಟೇ ಪ್ರಮಾಣದ ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ ಎಂದು ಆ ಪ್ರಕಟಣೆಯಲ್ಲಿ ಹೇಳಲಾಗಿದೆ.