"ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ": ವಿಷ್ಣು ದಿಯೋ ಸಾಯಿ ಬಗ್ಗೆ ದೊಡ್ಡ ಸುಳಿವು ನೀಡಿದ್ದ ಅಮಿತ್ ಶಾ

Update: 2023-12-10 14:09 GMT

ಅಮಿತ್ ಶಾ | Photo: PTI  

ರಾಯ್ಪುರ : ಪ್ರಮುಖ ಬುಡಕಟ್ಟು ನಾಯಕ ವಿಷ್ಣು ದಿಯೋ ಸಾಯಿ ಅವರನ್ನು ಉನ್ನತ ಹುದ್ದೆಗೆ ಹೆಸರಿಸುವ ಮೂಲಕ ಛತ್ತೀಸ್‌ಗಡದಲ್ಲಿ ಮುಖ್ಯಮಂತ್ರಿ ಆಯ್ಕೆಯ ಮೇಲಿನ ಕುತೂಹಲವನ್ನು ಬಿಜೆಪಿ ರವಿವಾರ ಕೊನೆಗೊಳಿಸಿದೆ. ಆದಾಗ್ಯೂ, ಈ ಘೋಷಣೆಯ ವಾರಗಳ ಮೊದಲು, ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಾಯಿ ಪರ ಪ್ರಚಾರ ಮಾಡುವಾಗ ಕೇಂದ್ರ ಸಚಿವ ಅಮಿತ್ ಶಾ ಒಂದು ದೊಡ್ಡ ಸುಳಿವು ನೀಡಿದ್ದರು.

"ಆಪ್ ಇಂಕೋ (ವಿಷ್ಣು ದಿಯೋ ಸಾಯಿ) ವಿಧಾಯಕ್ ಬನಾದೋ, ಉಂಕೋ ಬಡಾ ಆದ್ಮಿ ಬನಾನೇ ಕಾ ಕಾಮ್ ಹಮ್ ಕರೇಂಗೆ (ನೀವು ಅವರನ್ನು ಶಾಸಕರನ್ನಾಗಿ ಮಾಡಿ, ನಾವು ಅವರನ್ನು ದೊಡ್ಡ ವ್ಯಕ್ತಿಯಾಗಿ ಮಾಡುತ್ತೇವೆ) ಎಂದು ಅಮಿತ್ ಷಾ ಕುಂಕೂರಿನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು. ಕಾಂಗ್ರೆಸ್‌ನ ಹಾಲಿ ಶಾಸಕ ಯು.ಡಿ.ಮಿಂಜ್ ಅವರನ್ನು 25,541 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಕುಂಕುರಿ ಕ್ಷೇತ್ರವು ರಾಜ್ಯದ ಸುರ್ಗುಜಾ ವಿಭಾಗದಲ್ಲಿದ್ದು, ಅಲ್ಲಿ ಬಿಜೆಪಿ ಎಲ್ಲಾ 14 ಕ್ಷೇತ್ರಗಳನ್ನು ಗೆದ್ದಿದೆ. ರಾಯ್‌ಪುರದ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ಚುನಾಯಿತರಾದ 54 ಪಕ್ಷದ ಶಾಸಕರ ಸಭೆಯಲ್ಲಿ 59 ವರ್ಷ ವಯಸ್ಸಿನ ವಿಷ್ಣು ದಿಯೋ ಸಾಯಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.

"ಮುಖ್ಯಮಂತ್ರಿಯಾಗಿ, ನಾನು ಪ್ರಧಾನಿ ಮೋದಿಯವರ ಭರವಸೆಗಳನ್ನು ನೂತನ ಸರಕಾರದ ಮೂಲಕ ಈಡೇರಿಸಲು ಪ್ರಯತ್ನಿಸುತ್ತೇನೆ" ಎಂದು ಸಭೆಯ ನಂತರ ಸಾಯಿ ಹೇಳಿದರು. ಸಾಯಿ ಅವರು ಹಳ್ಳಿಯ ಸರಪಂಚ್ ಆಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಲೋಕಸಭಾ ಸಭಾ ಸದಸ್ಯರಾಗಿ ಕೇಂದ್ರ ಸಚಿವರಾಗಿ ಸಂಸತ್ತಿನಲ್ಲಿ ಓಡಾಡಿದ್ದರು. ಪಕ್ಷದೊಳಗೆ ಹಲವು ಪ್ರಮುಖ ಹುದ್ದೆಗಳನ್ನೂ ನಿರ್ವಹಿಸಿದ್ದರು. 2020 ರಿಂದ 2022 ರವರೆಗೆ ಛತ್ತೀಸ್‌ಗಡದ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಛತ್ತೀಸ್ಗಡದ ಒಟ್ಟು ಜನಸಂಖ್ಯೆ 32% ಭಾಗ ಆದಿವಾಸಿಗಳಾಗಿರುವುದರಿಂದ ಸಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 90 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 2018 ರಲ್ಲಿ ಗೆದ್ದ 68 ಸ್ಥಾನಗಳಿಂದ 35 ಸ್ಥಾನಗಳಿಗೆ ಇಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News