ಕ್ಯಾನ್ಸರ್ ವದಂತಿಯನ್ನು ತಳ್ಳಿಹಾಕಿದ ಮಲಯಾಳಂ ನಟ ಮಮ್ಮುಟ್ಟಿ

ಮಲಯಾಳಂ ನಟ ಮಮ್ಮುಟ್ಟಿ (Photo: Facebook)
ತಿರುವನಂತಪುರಂ : ಮಲಯಾಳಂ ನಟ ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿಯನ್ನು ಮಮ್ಮುಟ್ಟಿ ಅವರ ಪಿಆರ್ ತಂಡವು ನಿರಾಕರಿಸಿದೆ.
ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಚಿತ್ರೀಕರಣದಿಂದ ದೂರ ಸರಿದಿದ್ದಾರೆ ಎಂದು ಹೇಳಿಕೆಗಳೊಂದಿಗೆ ಸಾಮಾಜಿ ಮಾಧ್ಯಮಗಳಲ್ಲಿ ಮಮ್ಮುಟ್ಟಿ ಆರೋಗ್ಯದ ಕುರಿತು ವದಂತಿ ವೇಗವಾಗಿ ಹರಡಿತು. ಕೆಲ ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ವದಂತಿಗಳನ್ನು ನಿರಾಕರಿಸಿದರು.
ಇದರ ಬೆನ್ನಲ್ಲೇ ಮಮ್ಮುಟ್ಟಿ ಅವರ ಪಿಆರ್ ತಂಡವು ಪ್ರತಿಕ್ರಿಯಿಸಿ, ಮಮ್ಮುಟ್ಟಿ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ಅವರು ಆರೋಗ್ಯವಂತರಾಗಿದ್ದು, ರಮಝಾನ್ ಹಿನ್ನೆಲೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ಚೆನ್ನೈನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ವಿರಾಮದ ನಂತರ ಅವರು ಮೋಹನ್ ಲಾಲ್ ಜೊತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಮಮ್ಮುಟ್ಟಿ ಅವರು ಕರುಳಿನ ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದಾರೆ ಎಂದು Reddit ಪೋಸ್ಟ್‌ವೊಂದು ಹೇಳಿಕೊಂಡಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತು. ಇದು ಅಭಿಮಾನಿಗಳಲ್ಲಿ ಗೊಂದಲ ಮತ್ತು ಕಳವಳಕ್ಕೆ ಕಾರಣವಾಯಿತು. ಆದರೆ ಮಮ್ಮುಟ್ಟಿ ತಂಡವು ಊಹಾಪೋಹಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಅವರು ಆರೋಗ್ಯವಾಗಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಖಚಿತಪಡಿಸಿದೆ.