ಗುಜರಾತ್‌: 'ಗೋರಕ್ಷಕರಿಂದ' ವ್ಯಕ್ತಿಗೆ ಥಳಿತ; 10 ಮಂದಿ ಆರೋಪಿಗಳ ಬಂಧನ

Update: 2023-08-11 12:02 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಗುಜರಾತ್‌ನ ತಾಪಿ ಜಿಲ್ಲೆಯ ತೊಕರ್ವ ಗ್ರಾಮದಲ್ಲಿ 'ಗೋರಕ್ಷಕರು' 30 ವರ್ಷದ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು ಈ ಸಂಬಂಧ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಒಂಬತ್ತು ಎಮ್ಮೆಯ ಕರುಗಳನ್ನು ಪಿಕಪ್‌ ವಾಹನದಲ್ಲಿ ತಾಪಿಯ ಮಂಗಲದೇವ್‌ ಎಂಬ ಗ್ರಾಮದ ನಿವಾಸಿ ಅನಿಲ್‌ ಗಮಿತ್‌ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆತ ಎಮ್ಮೆ ಕರುಗಳನ್ನು ದಂಗ್‌ ಜಿಲ್ಲೆಯ ಕೊಸ್ಮಿಡಾ ಎಂಬಲ್ಲಿಂದ ಖರೀದಿಸಿ ಗ್ರಾಮಕ್ಕೆ ದಶರಥ್‌ ನಾಯಕ್‌ ಎಂಬಾತನ ಜೊತೆಗೆ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ.

ಒಬ್ಬ ಮಹಿಳೆ ಸೇರಿದಂತೆ ಜನರ ಗುಂಪೊಂದು ಆತನ ವಾಹನವನ್ನು ಮಂಗಲದೇವ್‌ ಗ್ರಾಮದ ಸಮೀಪ ನಿಲ್ಲಿಸಿ ಕರುಗಳನ್ನು ಏಕೆ ಸಾಗಿಸುತ್ತಿರುವೆ ಎಂದು ಪ್ರಶ್ನಿಸಿದ್ದರೆನ್ನಲಾಗಿದೆ.

ನಂತರ ಆತನಿಗೆ ದೊಣ್ಣೆಗಳಿಂದ ಹೊಡೆದು ಗಂಭಿರವಾಗಿ ಗಾಯಗೊಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು, ಈ ಸಂದರ್ಭ ದಶರಥ್‌ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ನಂತರ ಆತನೇ ಅನಿಲ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದ, ಅನಿಲ್‌ ಬಲಗಾಲಿನ ಹಲವು ಮೂಳೆ ಮುರಿತಕ್ಕೊಳಗಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಪೊಲೀಸರು ಬಂಧಿಸಿದ ಹತ್ತು ಮಂದಿಯಲ್ಲಿ ವಡೋದರಾದ 'ಗೋರಕ್ಷಕರ' ತಂಡದ ನಾಯಕಿ ನೇಹಾ ಪಟೇಲ್‌ ಕೂಡ ಸೇರಿದ್ದಾಳೆ.

ಗುರುವಾರ ತಾಪಿಯ ಬುಡಕಟ್ಟು ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ಐಪಿಸಿ ಸೆಕ್ಷನ್‌ 307 ಅಡಿಯಲ್ಲಿ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News