ಮಣಿಪುರ | ಹ್ಮಾರ್ ಸಮುದಾಯದ ಮಹಿಳೆಗೆ ಗುಂಡಿಕ್ಕಿ ಬೆಂಕಿ ಹಚ್ಚಿ ಹತ್ಯೆ
ಇಂಫಾಲ : ಹ್ಮಾರ್ ಸಮುದಾಯದ ಮೂರು ಮಕ್ಕಳ ತಾಯಿಗೆ ಸಶಸ್ತ್ರಧಾರಿ ದುಷ್ಕರ್ಮಿಗಳು ಗುಂಡಿಕ್ಕಿ, ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಗುರುವಾರ ರಾತ್ರಿ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆದಿದೆ.
ಗುಂಡಿನ ಕಾಳಗದ ನಂತರ ಅಪರಿಚಿತ ದುಷ್ಕರ್ಮಿಗಳು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಸುಟ್ಟು ಕರಕಲಾಗಿದ್ದ ಶಾಲಾ ಶಿಕ್ಷಕಿ ಝೋಸಾಂಗ್ಕಿಮ್ ಅವರ ಮೃತ ದೇಹವನ್ನು ಸ್ಥಳೀಯ ಸಂಘಟನೆಗಳು ವಶಪಡಿಸಿಕೊಂಡಿವೆ. ಹ್ಮಾರ್ ಸಮುದಾಯದ ಜನರು ಜನಾಂಗೀಯವಾಗಿ ಕುಕಿ-ಝೊ ಸಮುದಾಯದೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕುಕಿ ಸಮುದಾಯದ ಬಾಹುಳ್ಯ ಇರುವ ಚೂರಚಂದ್ ಪುರ್ ಜಿಲ್ಲೆಯಲ್ಲಿನ ಕುಕಿ-ಝೊ ಸಂಘಟನೆಯಾದ ಇಂಡಿಜಿನಸ್ ಟ್ರೈಬಲ್ ಲೀಡರ್ಸ್ ಫೋರಂ, ಜಿರಿಬಾಮ್ ಜಿಲ್ಲೆಯಲ್ಲಿರುವ ಝೈರವಾನ್ ಗ್ರಾಮಕ್ಕೆ ಪ್ರವೇಶಿಸಿದ ಮೈಥೇಯಿ ಸಮುದಾಯಕ್ಕೆ ಸೇರಿದ ಬಂದೂಕುಧಾರಿಗಳ ಗುಂಪು ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿತು ಎಂದು ಆರೋಪಿಸಿದೆ.
“ಬಹುತೇಕ ಗ್ರಾಮಸ್ಥರು ಈ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು, ಪಕ್ಕದಲ್ಲಿನ ಅರಣ್ಯಕ್ಕೆ ಪರಾರಿಯಾಗುವಲ್ಲಿ ಯಶಸ್ವಿಯಾದರೂ, ಮಹಿಳೆಯೊಬ್ಬರು ಆ ದುಷ್ಕರ್ಮಿಗಳಿಗೆ ಸೆರೆ ಸಿಕ್ಕಿದ್ದಾರೆ. ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಮೈಥೇಯಿ ಉಗ್ರರು, ನಂತರ ಆಕೆಯನ್ನು ಸುಟ್ಟು ಹಾಕಿದ್ದಾರೆ” ಎಂದು ಗ್ರಾಮಸ್ಥರನ್ನು ಉಲ್ಲೇಖಿಸಿ ಸಂಘಟನೆ ಆರೋಪಿಸಿದೆ.
ಗುಂಡಿನ ದಾಳಿಯ ಸಂದರ್ಭದಲ್ಲಿ ಗುಂಡೊಂದು ನನ್ನ ಪತ್ನಿಯ ಪೃಷ್ಠಕ್ಕೆ ತಗುಲಿತು. ನಾನು ನನ್ನ ವಯಸ್ಸಾದ ಪೋಷಕರು ಹಾಗೂ ಮೂವರು ಮಕ್ಕಳೊಂದಿಗೆ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾದೆ. ಆದರೆ, ನನ್ನ ಪತ್ನಿ ಅವರಿಗೆ ಸೆರೆ ಸಿಕ್ಕಳು ಎಂದು ಆಕೆಯ ಪತಿ ಗುರ್ತಾನ್ ಸ್ಯಾಂಗ್ ತಿಳಿಸಿದ್ದಾರೆ ಎಂದು ಹೇಳಿರುವ ಸಂಘಟನೆ, ಮೃತ ಮಹಿಳೆಯು ಹೆರ್ಮೋನ್ ಡ್ಯೂ ಇಂಗ್ಲೀಷ್ ಜೂನಿಯರ್ ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿದ್ದಳು ಎಂದೂ ಹೇಳಿದೆ.
ಜಿರಿಬಾಮ್ ಜಿಲ್ಲಾ ಕೇಂದ್ರದಿಂದ ಏಳು ಕಿಮೀ ದೂರದಲ್ಲಿರುವ ಝೈರ್ವಾನ್, ಹ್ಮಾರ್ ಸಮುದಾಯ ಬಾಹುಳ್ಯವಿರುವ ಗ್ರಾಮವಾಗಿದೆ. ಗುರುವಾರ ನಡೆದ ದಾಳಿಯಲ್ಲಿ ಕನಿಷ್ಠ ಪಕ್ಷ ಆರು ಮನೆಗಳನ್ನು ಸುಟ್ಟು ಹಾಕಲಾಗಿದೆ ಎಂದೂ ಸಂಘಟನೆ ಹೇಳಿದೆ.
ಆದರೆ, ಈ ಘಟನೆಯ ಕುರಿತು ಮಣಿಪುರ ಪೊಲೀಸರು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಕಳೆದ ವರ್ಷದ ಮೇ ತಿಂಗಳಿನಿಂದ ಮೈಥೇಯಿ-ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದಲ್ಲಿ ಮಣಿಪುರ ಬೇಯುತ್ತಿದ್ದು, ಇದುವರೆಗೆ ಸುಮಾರು 240 ಮಂದಿ ಮೃತಪಟ್ಟು, 60,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ರಾಜ್ಯದಲ್ಲಿ ಸೇನೆ ಸೇರಿದಂತೆ ದೊಡ್ಡ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದರೂ, ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ಮುಂದುವರಿದೇ ಇವೆ.
ಸೌಜನ್ಯ : deccanherald.com