ಆಸ್ಟ್ರೇಲಿಯ ಟುಡೇ ವೆಬ್‌ ಸೈಟ್‌ ಗೆ ನಿರ್ಬಂಧ : ಕೆನಡಾದ ಕ್ರಮಕ್ಕೆ ಭಾರತ ಟೀಕೆ

Update: 2024-11-08 12:59 GMT

PC : PTI

ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿದ್ದ ಆಸ್ಟ್ರೇಲಿಯ ಟುಡೇ ವೆಬ್‌ ಸೈಟ್‌ ಗೆ ಕೆನಡಾ ನಿರ್ಬಂಧ ವಿಧಿಸಿದೆ. ಕೆನಡಾ ಸರಕಾರದ ಈ ಕ್ರಮವನ್ನು ಭಾರತ ಟೀಕಿಸಿದ್ದು, ಇದು ವಾಕ್ ಸ್ವಾತಂತ್ರ್ಯದ ಬಗೆಗಿನ ಕೆನಡಾದ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದೆ.

ಕೆನಡಾ ಸರಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ʼಆಸ್ಟ್ರೇಲಿಯಾ ಟುಡೇʼ ವ್ಯವಸ್ಥಾಪಕ ಸಂಪಾದಕ ಜಿತಾರ್ಥ್ ಜೈ ಭಾರದ್ವಾಜ್, ಈ ಅಡೆತಡೆಗಳಿಂದ ವಿಚಲಿತರಾಗದೆ, ಪ್ರಮುಖ ಸುದ್ದಿಗಳನ್ನು ಮತ್ತು ಧ್ವನಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಮ್ಮ ಧ್ಯೇಯಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಸುದ್ದಿಗೋಷ್ಠಿಯ ಸುದ್ದಿಯನ್ನು ‘ಆಸ್ಟ್ರೇಲಿಯಾ ಟುಡೇ’ ತನ್ನ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕೆನಡಾ ‘ಆಸ್ಟ್ರೇಲಿಯಾ ಟುಡೇ’ ವೆಬ್‌ ಸೈಟ್ ಗೆ ನಿರ್ಬಂಧವನ್ನು ವಿಧಿಸಿತ್ತು. ಈ ಬಗ್ಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ವೆಬ್‌ ಸೈಟ್‌ ಗೆ ನಿಷೇಧ ವಿಧಿಸುವ ಕೆನಡಾದ ಕ್ರಮವು ಆಶ್ಚರ್ಯಕರವಾಗಿದೆ ಮತ್ತು ಇದು ವಾಕ್ ಸ್ವಾತಂತ್ರ್ಯದ ಬಗೆಗಿನ ಕೆನಡಾದ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವಿದೇಶಾಂಗ ವ್ಯವಹಾರಗಳ ಸಚಿವರು ಮೂರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಕೆನಡಾ ಪುರಾವೆಗಳಿಲ್ಲದೆ ಆರೋಪಗಳನ್ನು ಮಾಡುತ್ತಿದೆ. ಭಾರತೀಯ ರಾಜತಾಂತ್ರಿಕರ ಮೇಲೆ ಕಣ್ಗಾವಲು ಸ್ವೀಕಾರಾರ್ಹವಲ್ಲ ಎಂದು ಕರೆದರು ಮತ್ತು ಕೆನಡಾದಲ್ಲಿ ಭಾರತ ವಿರೋಧಿಗಳಿಗೆ ರಾಜಕೀಯ ಸ್ಥಾನಮಾನ ನೀಡಲಾಗುತ್ತಿದೆ ಎಂದು ಹೇಳಿದ್ದರು. ನೀವು ಈ ವಿಷಯಗಳಿಂದ ಯಾವ ಕಾರಣಕ್ಕೆ ಆಸ್ಟ್ರೇಲಿಯಾ ಟುಡೆ ವಾಹಿನಿಯನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದ್ದಾರೆ.

ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಭಾರತೀಯ ಏಜೆಂಟ್ ಗಳು ನಡೆಸಿದ್ದಾರೆ ಎಂದು ಯಾವುದೇ ಸಾಕ್ಷ್ಯವಿಲ್ಲದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ್ದರಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಬಿಗಡಾಯಿಸಿದೆ. ಈ ಆರೋಪಗಳನ್ನು ಹಲವು ಬಾರಿ ಅಲ್ಲಗಳೆದಿರುವ ಭಾರತ, ತನ್ನ ಆರೋಪವನ್ನು ಸಮರ್ಥಿಸಿಕೊಳ್ಳುವ ಸಾಕ್ಷ್ಯವನ್ನು ಕೆನಡಾ ಒದಗಿಸಬೇಕು ಎಂದು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News