ಮಾಂಸಾಹಾರ ತ್ಯಜಿಸುವಂತೆ ಪ್ರಿಯಕರನ ಒತ್ತಡದಿಂದ ಮಹಿಳಾ ಪೈಲಟ್ ಆತ್ಮಹತ್ಯೆ: ಆರೋಪ
ಮುಂಬೈ: 25 ವರ್ಷ ವಯಸ್ಸಿನ ಏರ್ ಇಂಡಿಯಾ ಮಹಿಳಾ ಪೈಲಟ್ ಮುಂಬೈನ ತನ್ನ ಫ್ಲಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಪ್ರಿಯಕರ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಮತ್ತು ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದುದರಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಲಾಗಿದೆ.
ಆದಿತ್ಯ ಪಂಡಿತ್ (27) ಎಂಬಾತನ ವಿರುದ್ಧ ಯುವತಿಯ ಕುಟುಂಬದವರು ದಾಖಲಿಸಿರುವ ದೂರಿನ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡಿರುವ ಸೃಷ್ಟಿ ತುಲಿ ಮೇಲೆ ಆಹಾರ ಪದ್ಧತಿಯನು ಬದಲಿಸಿಕೊಳ್ಳುವಂತೆ ಹಾಗೂ ಮಾಂಸಾಹಾರವನ್ನು ತ್ಯಜಿಸುವಂತೆ ತೀವ್ರ ಒತ್ತಡ ಹೇರಲಾಗಿತ್ತು ಎಂದು ತಿಳಿದು ಬಂದಿದೆ.
ಸೃಷ್ಟಿಯ ಮಾವ ವಿವೇಕ ಕುಮಾರ್ ತುಲಿ ಎಂಬುವವರು ಪೊವಾಯ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆದಿತ್ಯ ಪಂಡಿತ್ ತನ್ನ ಪ್ರಿಯತಮೆಯನ್ನು ನಿರಂತರವಾಗಿ ಅಗೌರವದಿಂದ ಕಾಣುತ್ತಿದ್ದ. ಇದರಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಪಾದಿಸಲಾಗಿದೆ.
"ಕಳೆದ ವರ್ಷದ ನವೆಂಬರ್ ನಲ್ಲಿ ಆದಿತ್ಯ ನಮ್ಮ ಕಾರಿನಲ್ಲಿ ಪುತ್ರಿಯರಾದ ರಾಶಿ ಮತ್ತು ಸೃಷ್ಟಿಯನ್ನು ದೆಹಲಿಗೆ ಶಾಂಪಿಂಗ್ ಗೆ ಕರೆದೊಯ್ದಿದ್ದ. ಆಗ ಪ್ರೇಮಿಗಳ ನಡುವೆ ವಾಗ್ವಾದ ನಡೆದಿತ್ತು. ರಾಶಿ ಎದುರಿನಲ್ಲೇ ಸೃಷ್ಟಿ ವಿರುದ್ಧ ಅವಹೇಳನಕಾರಿಯಾಗಿ ಆತ ಮಾತನಾಡಿದ್ದ. ಸಿಟ್ಟಿನಲ್ಲಿ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆಸಿದ್ದ" ಎಂದು ದೂರಿನಲ್ಲಿ ವಿವರಿಸಲಾಗಿದೆ. ಕಳೆದ ತಿಂಗಳು ಗುರುಗಾಂವ್ ನಲ್ಲಿ ಔತಣಕೂಟವೊಂದರಲ್ಲೂ ಸೃಷ್ಟಿಯ ಆಹಾರ ಪ್ರವೃತ್ತಿ ಬಗ್ಗೆ ಸಾರ್ವಜನಿಕವಾಗಿ ಅವಮಾನಿಸಿದ್ದ ಎಂದು ಹೇಳಲಾಗಿದೆ.