ಕಳೆದ ವರ್ಷ 2 ಲಕ್ಷ ಬಾಲ್ಯವಿವಾಹಗಳನ್ನು ತಡೆಯಲಾಗಿದೆ : ಕೇಂದ್ರ ಸಚಿವೆ
ಹೊಸದಿಲ್ಲಿ : ಕಳೆದೊಂದು ವರ್ಷದಲ್ಲಿ ಎರಡು ಲಕ್ಷ ಬಾಲ್ಯವಿವಾಹಗಳನ್ನು ತಡೆಯಲಾಗಿದೆ, ಆದರೆ ಈಗಲೂ ಭಾರತದಲ್ಲಿ ಪ್ರತಿ ಐವರು ಬಾಲಕಿಯರ ಪೈಕಿ ಓರ್ವಳ ವಿವಾಹ 18 ವರ್ಷಗಳ ಕಾನೂನುಬದ್ಧ ವಯಸ್ಸನ್ನು ತಲುಪುವ ಮೊದಲೇ ನಡೆಯುತ್ತಿದೆ ಎಂದು ಬುಧವಾರ ಇಲ್ಲಿ ತಿಳಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿಯವರು,ಈ ಪಿಡುಗಿನಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕಿದೆ ಎಂದು ಒತ್ತಿ ಹೇಳಿದರು.
ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, 2029ರ ವೇಳೆಗೆ ಬಾಲ್ಯವಿವಾಹಗಳ ಪ್ರಮಾಣವನ್ನು ಶೇ.5ಕ್ಕೂ ಕಡಿಮೆಗೊಳಿಸುವ ಗುರಿಯೊಂದಿಗೆ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ರೂಪಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಆಗ್ರಹಿಸಿದರು.
ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನವು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಹೆಚ್ಚಿನ ಬಾಲ್ಯವಿವಾಹಗಳು ನಡೆಯುತ್ತಿರುವ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ರಾಜಸ್ಥಾನ, ತ್ರಿಪುರಾ, ಅಸ್ಸಾಂ ಮತ್ತು ಆಂಧ್ರಪ್ರದೇಶ ರಾಜ್ಯಗಳು ಮತ್ತು ಸುಮಾರು 300 ಜಿಲ್ಲೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ.
‘ಬಾಲ್ಯವಿವಾಹವು ನಮ್ಮ ಮುಂದಿರುವ ಮಹತ್ವದ ಸವಾಲಾಗಿದ್ದು, ಲಕ್ಷಾಂತರ ಹೆಣ್ಣುಮಕ್ಕಳ ಸಾಮರ್ಥ್ಯದ ಮೇಲೆ ಮಿತಿಯನ್ನು ಹೇರುವ ಪದ್ಧತಿಯಾಗಿದೆ. ಬಾಲ್ಯವಿವಾಹವು ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗಿದೆ ಮತ್ತು ಕಾನೂನಿನಡಿ ಅಪರಾಧವೂ ಆಗಿದೆ ’ಎಂದು ಹೇಳಿದ ಅವರು,‘ಬಾಲ್ಯವಿವಾಹ ತಡೆ ಕಾಯ್ದೆಯಂತಹ ಕಾನೂನುಗಳು ಸಹಕಾರಿಯಾಗಿದ್ದರೂ ಕಾನೂನಿನಿಂದ ಮಾತ್ರವೇ ಈ ಸಮಸ್ಯೆಯನ್ನು ನಿರ್ಮೂಲಿಸಲು ಸಾಧ್ಯವಿಲ್ಲವಾದ್ದರಿಂದ ಅದರ ಕೆಡುಕಿನ ಬಗ್ಗೆ ಜಾಗ್ರತಿಯನ್ನು ಹೆಚ್ಚಿಸಲೂ ನಾವು ಗಮನವನ್ನು ಹರಿಸಬೇಕಿದೆ’ ಎಂದರು.
ದಕ್ಷಿಣ ಏಶ್ಯಾದೇಶಗಳಲ್ಲಿ ಬಾಲ್ಯವಿವಾಹ ಪ್ರಮಾಣದಲ್ಲಿ ಹೆಚ್ಚಿನ ಗಮನಾರ್ಹ ಜಾಗತಿಕ ಕುಸಿತ ಕಂಡು ಬಂದಿದ್ದು, ಈ ಸಾಧನೆಯಲ್ಲಿ ಭಾರತವು ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ವರದಿಯು ಹೇಳಿದೆ ಎಂದು ಅವರು ತಿಳಿಸಿದರು.
ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನವು ಬಾಲ್ಯವಿವಾಹದ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಸಂಬಂಧಿಸಿದ ಎಲ್ಲರನ್ನೂ ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಬಾಲ್ಯವಿವಾಹದ ಕುರಿತು ಜಾಗ್ರತಿ ಹೆಚ್ಚಿಸಲು, ಪ್ರಕರಣಗಳನ್ನು ವರದಿ ಮಾಡಲು ಮತ್ತು ಪ್ರಗತಿಯ ಮೇಲೆ ನಿಗಾಯಿರಿಸಲು ಬಾಲ್ಯವಿವಾಹ ಮುಕ್ತ ಭಾರತ ಪೋರ್ಟಲ್ ಈ ಉಪಕ್ರಮದ ಮುಖ್ಯ ವೈಶಿಷ್ಟ್ಯವಾಗಿದೆ.
ಶಿಕ್ಷಣ, ಆರ್ಥಿಕ ಭದ್ರತೆ ಮತ್ತು ಆರೋಗ್ಯ ಕ್ರಮಗಳ ಮೂಲಕ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಸರಕಾರದ ಉಪಕ್ರಮಗಳನ್ನು ಸಚಿವೆ ಎತ್ತಿ ತೋರಿಸಿದರು.
‘ಪಿತೃಪ್ರಭುತ್ವ ನಿಯಮಗಳು ಸವಾಲುಗಳನ್ನು ಒಡ್ಡುತ್ತಲೇ ಇರುತ್ತವೆ, ಆದರೆ ಬೇಟಿ ಬಚಾವೋ ಬೇಟಿ ಪಢಾವೋದಂತಹ ಕಾರ್ಯಕ್ರಮಗಳು ಸಮಾಜದ ಮನಃಸ್ಥಿತಿಯನ್ನು ಬದಲಿಸುವಲ್ಲಿ ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ. ನಿರಂತರ ಪ್ರಯತ್ನಗಳೊಂದಿಗೆ ನಾವು ನಮ್ಮ ಹೆಣ್ಣುಮಕ್ಕಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬಹುದು’ ಎಂದು ಅವರು ಹೇಳಿದರು.