ಮಹಾಯುತಿ ಗೆಲುವು ‘ಲಕ್ಕಿ ಡ್ರಾ’, ಇವಿಎಂ ಹೈ ತೋ ಮುಮ್ಕಿನ್ ಹೈ : ಶಿವಸೇನೆ(ಯುಬಿಟಿ) ಮುಖವಾಣಿ ‘ಸಾಮ್ನಾ’

Update: 2024-11-27 16:09 GMT

ಉದ್ಧವ್ ಠಾಕ್ರೆ | PTI 

ಮುಂಬೈ : ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿಯು ‘ಬಂಪರ್ ಲಕ್ಕಿ ಡ್ರಾ’ ಗೆದ್ದಿದೆ, ಆದರೆ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಬಳಕೆಯ ಮೇಲೆ ಸಂಶಯದ ಮೋಡವು ಕವಿದಿದೆ ಎಂದು ಶಿವಸೇನೆ(ಯುಬಿಟಿ) ಬುಧವಾರ ಹೇಳಿದೆ.

‘ಇವಿಎಂ ಹೈ ತೋ ಮುಮ್ಕಿನ್ ಹೈ(ಇವಿಎಂ ಇದ್ದರೆ ಏನು ಬೇಕಾದರೂ ಸಾಧ್ಯ)’ ಎಂದು ಪಕ್ಷದ ಮುಖವಾಣಿ ‘ಸಾಮನಾ’ತನ್ನ ಸಂಪಾದಕೀಯದಲ್ಲಿ ಬರೆದಿದೆ.

ಅಮರಿಕದ ಬಿಲಿಯಾಧಿಪತಿ ಎಲಾನ್ ಮಸ್ಕ್ ಅವರು ಭಾರತೀಯ ಚುನಾವಣೆಗಳಲ್ಲಿ ಮತ ಎಣಿಕೆಯ ವೇಗವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅದನ್ನು ತನ್ನ ದೇಶದಲ್ಲಿಯ ಅಧ್ಯಕ್ಷೀಯ ಚುನಾವಣೆಗಳಲ್ಲಿ ಮಂದಗತಿಯ ಮತ ಎಣಿಕೆಗೆ ಹೋಲಿಸಿದ್ದಾರೆ. ಆದರೆ ಸಾಮಾನ್ಯ ಭಾರತೀಯರೂ ಇವಿಎಮ್‌ಗಳ ಕಾರ್ಯನಿರ್ವಹಣೆಯಿಂದ ‘ಮೂಕ ವಿಸ್ಮಿತ’ರಾಗಿದ್ದಾರೆ ಎಂದು ಹೇಳಿರುವ ಸಾಮನಾ, ಇದೇ ಮಸ್ಕ್ ಇವಿಎಮ್‌ಗಳನ್ನು ಹ್ಯಾಕ್ ಮಾಡಬಹುದು ಎಂದು ಕೆಲವು ತಿಂಗಳುಗಳ ಹಿಂದೆ ಹೇಳಿದ್ದನ್ನು ಬೆಟ್ಟು ಮಾಡಿದೆ.

288 ಸ್ಥಾನಗಳಲ್ಲಿ 230 ಸ್ಥಾನಗಳ ಈ ‘ಬಂಪರ್ ಲಕ್ಕಿ ಡ್ರಾ’ವನ್ನು ಆಡಳಿತಾರೂಢ ಮಹಾಯುತಿ ಹೇಗೆ ಗೆದ್ದಿದೆ? ಉತ್ತರಗಳನ್ನು ಹುಡುಕುವಾಗ ಆಲೋಚನೆಯು ಇವಿಎಮ್‌ಗಳ ಬಳಿ ಬಂದು ನಿಲ್ಲುತ್ತದೆ. ಮಹಾರಾಷ್ಟ್ರದಲ್ಲಿ ಬಳಕೆಯಾದ ಇವಿಎಮ್‌ಗಳ ‘ಗುಜರಾತ್-ರಾಜಸ್ಥಾನ ಸಂಪರ್ಕ’,95 ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಮ್‌ಗಳು ಎಣಿಕೆ ಮಾಡಿದ ಮತಗಳು ಮತದಾನದ ಪ್ರಮಾಣದೊಂದಿಗೆ ತಾಳೆಯಾಗದಿರುವುದು, ಇವಿಎಮ್‌ಗಳಲ್ಲಿ ಬಳಸಲಾದ ಬ್ಯಾಟರಿಗಳ ಚಾರ್ಜಿಂಗ್ ನಿಗೂಢತೆ ಮತ್ತು ಇತರ ಹಲವಾರು ವಿಷಯಗಳು ‘ಇವಿಎಂ ಹಗರಣ’ ಕುರಿತು ಅನುಮಾನಗಳನ್ನು ಬಲಗೊಳಿಸಿವೆ ಎಂದು ಹೇಳಿರುವ ಸಾಮನಾದ ಸಂಪಾದಕೀಯವು, ಮಹಾಯುತಿ ಹೇಗೆ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಮತಗಳನ್ನು ಪಡೆದುಕೊಂಡಿದೆ ಎಂದು ಇಡೀ ದೇಶವೇ ಅಚ್ಚರಿ ಪಡುತ್ತಿದೆ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News