2023ಕ್ಕೆ ಹೋಲಿಸಿದರೆ 2024ರಲ್ಲಿ ವಿಮಾನ ಪ್ರಯಾಣ ದರ ಇಳಿಕೆ : ಕೇಂದ್ರ ಸರಕಾರ
ಹೊಸ ದಿಲ್ಲಿ: 2023ಕ್ಕೆ ಹೋಲಿಸಿದರೆ 2024ರಲ್ಲಿ ವಿಮಾನ ಪ್ರಯಾಣ ದರವು ಇಳಿಕೆಯಾಗಿದೆ ಎಂದು ಹೇಳಿರುವ ಕೇಂದ್ರ ಸರಕಾರ, ಪ್ರಮುಖವಾಗಿ ಹಬ್ಬದ ಋತುವಿನಲ್ಲಿ ವಿವಿಧ ಮಾರ್ಗಗಳ ವಿಮಾನ ಟಿಕೆಟ್ ದರ ಇಳಿಕೆ ಕಂಡಿದೆ ಎಂದೂ ಹೇಳಿದೆ.
ವಿಮಾನ ಟಿಕೆಟ್ ದರಗಳು ಅಧಿಕವಾಗಿವೆ ಎಂದು ಕೆಲ ವಲಯಗಳಿಂದ ಕಳವಳಗಳು ವ್ಯಕ್ತವಾಗುತ್ತಿರುವ ಬೆನ್ನಿಗೇ, ವಿಮಾನ ದರಗಳು ಸರಕಾರದ ನಿಯಮಗಳಿಗೆ ಒಳಪಟ್ಟಿಲ್ಲ. ವಿಮಾನ ಯಾನ ಸಂಸ್ಥೆಗಳು ಹಾಲಿ ನಿಯಮಗಳಿಗೆ ಒಳಪಟ್ಟು, ತಮ್ಮ ಕಾರ್ಯಾಚರಣೆಯ ಅಗತ್ಯಗಳಿಗೆ ತಕ್ಕಂತೆ ವಿಮಾನ ಟಿಕೆಟ್ ದರಗಳನ್ನು ನಿರ್ಧರಿಸುವ ವಿವೇಚನೆಯನ್ನು ಹೊಂದಿವೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ರಾಜ್ಯಸಭೆಗೆ ತಿಳಿಸಿದ್ದಾರೆ.
“ಮಾರುಕಟ್ಟೆ ಸ್ಪರ್ಧಾತ್ಮಕತೆಯನ್ನು ನಿರ್ವಹಿಸಲು ಸರಕಾರವು ವಿಮಾನ ಪ್ರಯಾಣ ದರವನ್ನು ನಿಗದಿಗೊಳಿಸುವುದರಿಂದ ಸಾಮಾನ್ಯವಾಗಿ ದೂರ ಉಳಿಯುತ್ತದೆ. ಆದರೆ, ಪ್ರಯಾಣಿಕರ ಆರಾಮದಾಯಕತೆ ಹಾಗೂ ಕಲ್ಯಾಣವನ್ನು ಖಾತರಿಪಡಿಸಲು ಸರಕಾರವು ಜಾಗೃತವಾಗಿದ್ದು, ದುಬಾರಿ ದರ ವಿಧಿಸುವುದನ್ನು ತಡೆಯಲು ಒಂದು ವಲಯದಿಂದ ಮತ್ತೊಂದು ವಲಯಕ್ಕೆ ಸಾಮರ್ಥ್ಯ ವರ್ಗಾವಣೆ ಮಾಡಲು ಸರಕಾರ ಮಧ್ಯಸಪ್ರವೇಶಿಸುತ್ತದೆ” ಎಂದು ನವೆಂಬರ್ 25ರಂದು ರಾಜ್ಯಸಭೆಗೆ ನೀಡಿರುವ ಲಿಖತ ಉತ್ತರದಲ್ಲಿ ಅವರು ಹೇಳಿದ್ದಾರೆ.
ವಿಮಾನ ದರಗಳು ಕ್ರಿಯಾಶೀಲವಾಗಿದ್ದು, ಅವು ಬೇಡಿಕೆ ಮತ್ತು ಪೂರೈಕೆಯ ಕಾರ್ಯಾಚರಣೆಯಾಗಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ವಿಮಾನ ಯಾನ ಸಂಸ್ಥೆಗಳು ಹಾಗೂ ಆನ್ ಲೈನ್ ಟಿಕೆಟಿಂಗ್ ಏಜೆಂಟ್ ಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುವ ಮೂಲಕ ಸರಕಾರವು ಟಿಕೆಟ್ ದರಗಳ ಏರಿಳಿತದ ಮೇಲೆ ಕಣ್ಣಿರಿಸಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ವಿಮಾನ ಟಿಕೆಟ್ ದರಗಳು ಹಗುರವಾಗಿವೆ” ಎಂದು ಮೊಹೊಲ್ ತಿಳಿಸಿದ್ದಾರೆ.
“ವಿಮಾನ ಟಿಕೆಟ್ ದರಗಳನ್ನು ವಿಧಿಸುವಾಗ ಸಕಾರಣವನ್ನು ಖಾತರಿಗೊಳಿಸಬೇಕು ಹಾಗೂ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಿಮಾನ ಯಾನ ಸಂಸ್ಥೆಗಳಿಗೆ ತಿಳಿವಳಿಕೆ ನೀಡಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಹಬ್ಬದ ಋತುವಿನಲ್ಲಿ ವಿವಿಧ ವಲಯಗಳ ವಿಮಾನ ದರಗಳಲ್ಲಿ ಇಳಿಕೆ ಕಂಡು ಬಂದಿದೆ” ಎಂದೂ ಅವರು ಮಾಹಿತಿ ನೀಡಿದ್ದಾರೆ.