ʼಡಿಜಿಟಲ್ ಅರೆಸ್ಟ್’ ಹಗರಣ | 7 ಲಕ್ಷ ರೂ. ಕಳೆದುಕೊಂಡ ಐಐಟಿ ಬಾಂಬೆ ವಿದ್ಯಾರ್ಥಿ
ಮುಂಬೈ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯ 25 ವರ್ಷದ ವಿದ್ಯಾರ್ಥಿಯೋರ್ವ ಡಿಜಿಟಲ್ ಅರೆಸ್ಟ್ ಹಗರಣದ ಬಲೆಗೆ ಬಿದ್ದು 7.29 ಲಕ್ಷ ರೂ. ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಎಂದು ಹೇಳಿಕೊಂಡ ವಂಚಕರು ವಿದ್ಯಾರ್ಥಿ ವಿರುದ್ಧ ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವುದಾಗಿ ಸುಳ್ಳು ಆರೋಪ ಹೊರಿಸಿದ್ದಾರೆ ಹಾಗೂ ಬಂಧಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ.
25 ವರ್ಷದ ಯುವಕ ಈ ವರ್ಷ ಜುಲೈಯಲ್ಲಿ ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದ್ದ. ಕರೆ ಮಾಡಿದ ವ್ಯಕ್ತಿ ತಾನು ಟ್ರಾಯ್ ಉದ್ಯೋಗಿ ಎಂದು ಹೇಳಿಕೊಂಡಿದ್ದ. ಅಲ್ಲದೆ, ನಿಮ್ಮ ಮೊಬೈಲ್ ಸಂಖ್ಯೆಯ ವಿರುದ್ಧ ಕಾನೂನು ಬಾಹಿರ ಚಟುವಟಿಕೆಯ 17 ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದ ಎಂದು ಮುಂಬೈಯ ಪೊವಾಯಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ನಿಮ್ಮ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವುದನ್ನು ತಡೆಯುವ ಸಲುವಾಗಿ ನೀವು ಪೊಲೀಸರಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ)ಪಡೆಯಬೇಕು ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದ. ಅಲ್ಲದೆ, ತಾನು ಕರೆಯನ್ನು ಸೈಬರ್ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸುತ್ತಿರುವುದಾಗಿ ಯುವಕನಿಗೆ ತಿಳಿಸಿದ್ದ ಎಂದು ಅವರು ಹೇಳಿದ್ದಾರೆ.
ಅನಂತರ ಆತ ವಾಟ್ಸ್ ಆ್ಯಪ್ ವೀಡಿಯೊ ಕರೆ ಮಾಡಿದ್ದ. ಆ ವೀಡಿಯೊ ಕರೆಯಲ್ಲಿ ಪೊಲೀಸ್ ಅಧಿಕಾರಿಯಂತೆ ವೇಷ ಧರಿಸಿದ ವ್ಯಕಿಯೋರ್ವ ಕಂಡು ಬಂದಿದ್ದಾನೆ. ಆತ ಆಧಾರ್ ಸಂಖ್ಯೆ ನೀಡುವಂತೆ ಯುವಕನನ್ನು ಒತ್ತಾಯಿಸಿದ್ದಾನೆ. ಅಲ್ಲದೆ, ನೀವು ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದೀರಿ ಎಂದು ಆರೋಪಿಸಿದ್ದಾನೆ. ಯುಪಿಐ ಮೂಲಕ 29,500 ರೂ.ಗಳನ್ನು ವರ್ಗಾವಣೆ ಮಾಡುವಂತೆ ಆತ ಯವಕನಿಗೆ ಬಲವಂತಪಡಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಅನಂತರ ವ್ಯಕ್ತಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್‌ನಲ್ಲಿ ಇರಿಸಲಾಗಿದೆ ಮತ್ತು ಯಾರನ್ನೂ ಸಂಪರ್ಕಿಸುವುದನ್ನು ನಿಷೇಧಿಸಲಾಗಿದೆ ಎಂದು ಆತ ಹೇಳಿದ್ದಾನೆ. ಮರುದಿನ ಆತ ಯುವಕನಿಗೆ ಕರೆ ಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸಿದ್ದಾನೆ.
ಈ ಸಂದರ್ಭ ಯುವಕ ತನ್ನ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿದ್ದು, ವಂಚಕರು ಆತನ ಖಾತೆಯಿಂದ 7 ಲಕ್ಷ ರೂ. ತೆಗೆದಿದ್ದಾರೆ. ಹಣ ತೆಗೆದುಕೊಂಡ ಬಳಿಕ ವಂಚಕ, ನೀವು ಇನ್ನು ಸುರಕ್ಷಿತ. ಬಂಧಿಸುವುದಿಲ್ಲ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಬಗ್ಗೆ ಆನ್‌ಲೈನ್ ಹುಡುಕಾಟ ನಡೆಸಿದ ನಂತರ ತಾನು ಮೋಸ ಹೋಗಿದ್ದೇನೆ ಎಂದು ಅರಿತ ವಿದ್ಯಾರ್ಥಿ ಪೊಲೀಸರನ್ನು ಸಂಪರ್ಕಿಸಿ ಅಪರಿಚಿತ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
►‘ಡಿಜಿಟಲ್ ಅರೆಸ್ಟ್’ ಎಂದರೇನು?
‘ಡಿಜಿಟಲ್ ಅರೆಸ್ಟ್’ ಎಂಬುದು ಸೈಬರ್ ವಂಚನೆಯ ಹೊಸ ಹಾಗೂ ಬೆಳೆಯುತ್ತಿರುವ ರೂಪವಾಗಿದ್ದು, ವಂಚಕರು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಥವಾ ಸರಕಾರಿ ಸಂಸ್ಥೆಗಳ ಸಿಬ್ಬಂದಿಯೆಂದು ಹೇಳಿಕೊಳ್ಳುತ್ತಾರೆ ಹಾಗೂ ವ್ಯಕ್ತಿಗೆ ಆಡಿಯೊ ಅಥವಾ ವೀಡಿಯೊ ಮೂಲಕ ಬೆದರಿಕೆ ಒಡ್ಡುತ್ತಾರೆ. ವ್ಯಕ್ತಿಗಳನ್ನು ವಶದಲ್ಲಿರಿಸಿಕೊಳ್ಳುತ್ತಾರೆ ಹಾಗೂ ಹಣ ಪಾವತಿಸುವಂತೆ ಒತ್ತಡ ಹೇರುತ್ತಾರೆ.