ಮಹಾರಾಷ್ಟ್ರ | ಸೋಲಿನಿಂದ ಕುದಿಯುತ್ತಿರುವ ಎಂವಿಎ ಇವಿಎಮ್‌ಗಳ ವಿರುದ್ಧ ಪ್ರತಿಭಟನೆಗೆ ಸಜ್ಜು

Update: 2024-11-27 14:58 GMT

ಸಾಂದರ್ಭಿಕ ಚಿತ್ರ | PC : PTI  

ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಕುದಿಯುತ್ತಿರುವ ಮಹಾ ವಿಕಾಸ ಅಘಾಡಿ (ಎಂವಿಎ) ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಗೆ ಸಜ್ಜಾಗುತ್ತಿದೆ. ತನ್ನ ಸೋಲಿಗೆ ಇವಿಎಮ್‌ಗಳು ಕಾರಣವೆಂದು ಅದು ದೂಷಿಸಿದೆ.

ಇವಿಎಮ್‌ಗಳ ಬದಲು ಮತಪತ್ರಗಳ ಪದ್ಧತಿಗೆ ಮರಳಬೇಕು ಎಂದು ಕೋರಿ ನ್ಯಾಯಾಲಯದ ಮೆಟ್ಟಿಲನ್ನೂ ಏರಲು ಕಾಂಗ್ರಸ್, ಶಿವಸೇನೆ(ಉದ್ಧವ ಠಾಕ್ರೆ) ಮತ್ತು ಎನ್‌ಸಿಪಿ (ಶರದ್ ಪವಾರ್)ಯನ್ನು ಒಳಗೊಂಡಿರುವ ಎಂವಿಎ ಚಿಂತನೆ ನಡೆಸಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 235 ಸ್ಥಾನಗಳನ್ನು ಗೆದ್ದಿದ್ದರೆ ಎಂವಿಎ ಕೇವಲ 49 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಠಾಕ್ರೆ ಮತ್ತು ಪವಾರ್ ಅವರು ಬುಧವಾರ ಪರಾಜಿತ ಎಂವಿಎ ಅಭ್ಯರ್ಥಿಗಳನ್ನು ಭೇಟಿಯಾಗಿ ಪ್ರತಿಪಕ್ಷಗಳ ದೀರ್ಘಕಾಲದ ಕಳವಳವನ್ನು ಪರಿಹರಿಸಲು ರಾಜ್ಯಮತ್ತು ರಾಷ್ಟ್ರೀಯ ಮಟ್ಟಗಳಲ್ಲಿ ಕಾನೂನು ತಂಡಗಳನ್ನು ರಚಿಸುವ ಕುರಿತು ಚರ್ಚಿಸಿದರು.

ಮತದಾನದ ಸಂಖ್ಯೆಯನ್ನು ದೃಢಪಡಿಸಿಕೊಳ್ಳಲು ವಿವಿಪ್ಯಾಟ್ ವಿಶ್ಲೇಷಣೆಗೆ ಕೋರುವಂತೆ ಪವಾರ್ ತನ್ನ ಪಕ್ಷದ ಪರಾಜಿತ ಅಭ್ಯರ್ಥಿಗಳನ್ನು ಆಗ್ರಹಿಸಿದ್ದಾರೆ.

ಪವಾರ್ ಮೊಮ್ಮಗ ರೋಹಿತ ಪವಾರ್ ಸೇರಿದಂತೆ ಹಿರಿಯ ಎನ್‌ಸಿಪಿ ನಾಯಕರು ಮತ ಎಣಿಕೆಯಲ್ಲಿ ವಂಚನೆ ನಡೆದಿರುವ ಬಗ್ಗೆ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News