ಮಕ್ಕಳಿಗೆಂದು ಗುರುತಿಸಲಾದ ಆನ್ ಲೈನ್ ವೇದಿಕೆಗಳಲ್ಲಿ ಅಶ್ಲೀಲ ಜಾಹೀರಾತುಗಳು : ಪೋಷಕರ ಆರೋಪ
ಹೊಸದಿಲ್ಲಿ: ಮಕ್ಕಳು ಸೇರಿದಂತೆ ಸರ್ವರಿಗೂ ಸೂಕ್ತ ಎಂದು ಗುರುತಿಸಲಾದ ಆನ್ ಲೈನ್ ವೇದಿಕೆಗಳಲ್ಲಿ ವಯಸ್ಸಿಗೆ ತಕ್ಕದಲ್ಲದ ಜಾಹೀರಾತುಗಳು ಕಂಡು ಬರುತ್ತಿವೆ ಎಂದು ಸುಮಾರು ಶೇ. 60ರಷ್ಟು ಪೋಷಕರು ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ಆನ್ ಲೈನ್ ಸಮೀಕ್ಷಾ ವೇದಿಕೆಯಾದ LocalCircles ತನ್ನ ವರದಿಯಲ್ಲಿ ಹೇಳಿದೆ.
ಕಳೆದ ಮೂರು ವರ್ಷಗಳಲ್ಲಿ ಸಾರ್ವತ್ರಿಕ ವೀಕ್ಷಣೆಗೆ ಯೋಗ್ಯವಾದ ಆನ್ ಲೈನ್ ತುಣುಕುಗಳನ್ನು ವೀಕ್ಷಿಸುವಾಗ ಜೂಜಾಟ/ಆಟ, ಒಳ ಉಡುಪುಗಳು ಹಾಗೂ ಲೈಂಗಿಕ ಸ್ವಾಸ್ಥ್ಯತೆಗೆ ಸಂಬಂಧಿಸಿದ ಜಾಹೀರಾತುಗಳು ಪದೇ ಪದೇ ಪೋಷಕರಿಗೆ ಕಂಡು ಬಂದಿವೆ ಎಂದು ಹೇಳಲಾಗಿದೆ.
“ಮಕ್ಕಳು ಅಥವಾ ಸರ್ವರಿಗೂ ಸೂಕ್ತವೆಂದು ಗುರುತಿಸಲಾದ ಕಾರ್ಯಕ್ರಮ, ವಿಡಿಯೊ ಅಥವಾ ಚಲನಚಿತ್ರಗಳ ನಡುವೆ ವಯಸ್ಸಿಗೆ ತಕ್ಕದಲ್ಲದ ಜಾಹೀರಾತುಗಳನ್ನು ತುರುಕಿರುವ ಒಂದಕ್ಕಿಂತ ಹೆಚ್ಚು ನಿದರ್ಶನಗಳ ಕುರಿತು ಸಮೀಕ್ಷೆ ಮಾಡಲಾದ ಶೇ. 60ರಷ್ಟು ಪೋಷಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ” ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಭಾರತದ 305 ಜಿಲ್ಲೆಗಳಲ್ಲಿ ನೆಲೆಸಿರುವ ಪೋಷಕರಿಂದ 30,000ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದು, ಪ್ರಶ್ನೆಯಿಂದ ಪ್ರಶ್ನೆಗೆ ಅವರ ಉತ್ತರಗಳು ವಿಭಿನ್ನವಾಗಿವೆ ಎಂದು ಸಮೀಕ್ಷೆ ಹೇಳಿದೆ.
“ಭಾರತದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಸಾಧನಗಳನ್ನು ತಮ್ಮ ಪೋಷಕರೊಂದಿಗೆ ಹಂಚಿಕೊಳ್ಳುವುದರಿಂದ, ಮೊಬೈಲ್ ಸಾಧನಗಳ ವಾರಸುದಾರರ ಬದಲು, ನೇರವಾಗಿ ಪ್ರಸಾರವಾಗುವ ತುಣುಕುಗಳನ್ನು ಆಧರಿಸಿದ ಜಾಹೀರಾತುಗಳ ಪ್ರಸಾರವನ್ನು ಆನ್ ಲೈನ್ ವೇದಿಕೆಗಳು ಹಾಗೂ ಸರಕಾರ ಖಾತರಿ ಪಡಿಸಬೇಕು” ಎಂದು LocalCircles ಸಂಸ್ಥಾಪಕ ಸಚಿನ್ ತಪಾರಿಯ ಅಭಿಪ್ರಾಯ ಪಡುತ್ತಾರೆ.
ವಯಸ್ಸಿಗೆ ತಕ್ಕುದಾದ ಜಾಹೀರಾತು ರೂಢಿಗಳನ್ನು ಉಲ್ಲಂಘಿಸುವುದರ ವಿರುದ್ಧ ಸರಕಾರ ಅತ್ಯಧಿಕ ಪ್ರಮಾಣದ ದಂಡ ವಿಧಿಸಬೇಕು ಎಂದು ಸಮೀಕ್ಷೆಗೊಳಪಟ್ಟಿರುವ ಸುಮಾರು ಶೇ. 88ರಷ್ಟು ಪೋಷಕರು ಬಲವಾಗಿ ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಅಶ್ಲೀಲ ತುಣುಕುಗಳನ್ನು ಹತ್ತಿಕ್ಕಲು ಹಾಲಿ ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರೂ ಆದ ಅಶ್ವಿುನಿ ವೈಷ್ಣವ್, ಸಂಸದೀಯ ಸ್ಥಾಯಿ ಸಮಿತಿಯು ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಹಾಗೂ ಈ ಕುರಿತು ಮತ್ತಷ್ಟು ಕಠಿಣ ಕಾನೂನುಗಳನ್ನು ರೂಪಿಸಲು ಸಹಮತ ಮೂಡಬೇಕು ಎಂದು ಲೋಕಸಭೆಯಲ್ಲಿ ಕರೆ ನೀಡಿದ್ದರು.
ಯಾವ ಬಗೆಯ ಜಾಹೀರಾತು ತುಣುಕು ನಿಮ್ಮ ಅನುಭವಕ್ಕೆ ಬಂದಿದೆ ಎಂದು ಕೇಳಲಾಗಿರುವ ಪ್ರಶ್ನೆಗೆ, ಮಕ್ಕಳಿಗೆ ಸೂಕ್ತ ಎಂದು ಘೋಷಿಸಲಾಗಿರುವ ತುಣುಕುಗಳ ನಡುವೆ ಜೂಜಾಟ/ಆಟ (ನೇರ ಅಥವಾ ಮರೆಮಾಚಿದ) ಜಾಹೀರಾತುಗಳನ್ನು ಅತೀ ಹೆಚ್ಚು ಪ್ರದರ್ಶಿಸಲಾಗುತ್ತದೆ ಎಂದು 10,698 ಪೋಷಕರ ಪೈಕಿ ಶೇ. 41ರಷ್ಟು ಮಂದಿ ಮಾಹಿತಿ ನೀಡಿದ್ದಾರೆ.
ಸುಮಾರು ಶೇ. 35ರಷ್ಟು ಪೋಷಕರು ಪದೇ ಪದೇ ಒಳ ಉಡುಪುಗಳ ಜಾಹೀರಾತು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದರೆ, ಶೇ. 29ರಷ್ಟು ಪೋಷಕರು ಲೈಂಗಿಕ ಸ್ವಾಸ್ಥ್ಯ ಕುರಿತ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಶೇ. 24ರಷ್ಟು ಪೋಷಕರು ನಾವು ಮದ್ಯ (ನೇರ ಅಥವಾ ಮರೆಮಾಚಿದ) ಹಾಗೂ ತಂಬಾಕು (ನೇರ ಅಥವಾ ಮರೆಮಾಚಿದ) ಜಾಹೀರಾತುಗಳನ್ನು ಚಲನಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಂಡಿದ್ದು, ಅವು ವಯಸ್ಸಿಗೆ ತಕ್ಕುದಾದ ಜಾಹೀರಾತಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.