ಗುರುವಾರದಿಂದ ನಮ್ಮ ಸರಕಾರದ ಹೊಸ ಇನಿಂಗ್ಸ್ ಪ್ರಾರಂಭ : ಹೇಮಂತ್ ಸೊರೇನ್

Update: 2024-11-27 21:20 IST
Photo of Jharkhand Chief Minister Hemant Soren with INDI alliance leaders leaves after meeting Governor Santosh Gangwar regarding formation of the new government

ಹೇಮಂತ್ ಸೊರೇನ್ | PC : PTI  

  • whatsapp icon

ರಾಮಗಢ : ಗುರುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ನಮ್ಮ ಸರಕಾರದ ಹೊಸ ಇನಿಂಗ್ಸ್ ಪ್ರಾರಂಭಗೊಳ್ಳಲಿದೆ ಎಂದು ಜಾರ್ಖಂಡ್ ನ ನಿಯೋಜಿತ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.

ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಹಿಂದಿನ ದಿನ ರಾಮಗಢ ಜಿಲ್ಲೆಯ ತಮ್ಮ ಪೂರ್ವಜರ ನೆಮ್ರಾ ಗ್ರಾಮಕ್ಕೆ ತಮ್ಮ ಪತ್ನಿ ಕಲ್ಪನಾರೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಹುತಾತ್ಮ ದಿವಸವನ್ನಾಗಿ ಆಚರಿಸಲಾಗುವ ತಮ್ಮ ತಾತ ಸೊಬಾರಣ್ ಸೊರೇನ್ ಅವರ 67ನೇ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ನಂತರ, ರಾಂಚಿಯ ಮರಾಬದಿ ಮೈದಾನದಲ್ಲಿ ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ತಮ್ಮ ಗ್ರಾಮದ ನಿವಾಸಿಗಳಿಗೆ ಹೇಮಂತ್ ಸೊರೇನ್ ಆಹ್ವಾನವನ್ನೂ ನೀಡಿದರು.

ನೆಮ್ರಾದ ಲುಕೈಯತಂಡ್ ನಲ್ಲಿ ಅವರನ್ನುದ್ದೇಶಿಸಿ ಮಾತನಾಡಿದ ಹೇಮಂತ್ ಸೊರೇನ್, ಸರಕಾರ ರಚನೆಯ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

“ನಾಳೆಯಿಂದ ನಮ್ಮ ಸರಕಾರದ ಹೊಸ ಇನಿಂಗ್ಸ್ ಪ್ರಾರಂಭವಾಗಲಿದೆ. ಗುರುವಾರದಂದು ಪ್ರಮಾಣ ವಚನ ಸಮಾರಂಭ ನಿಗದಿಯಾಗಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ನಾನು ನಿಮಗೆಲ್ಲ ಆಹ್ವಾನ ನೀಡುತ್ತಿದ್ದೇನೆ. ನಮ್ಮ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನೀವೆಲ್ಲ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದೀರಿ” ಎಂದು ಅವರು ಗ್ರಾಮಸ್ಥರನ್ನು ಪ್ರಶಂಸಿಸಿದರು.

ಹಿರಿಯ ಜೆಎಂಎಂ ನಾಯಕರ ಪ್ರಕಾರ, ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ 15 ವರ್ಷದವರಾಗಿದ್ದಾಗ, ಲೇವಾದೇವಿಗಾರರು ಹೇಮಂತ್ ಸೊರೇನ್ ಅವರ ತಾತ ಸೊಬಾರಣ್ ಅನ್ನು ಹತ್ಯೆಗೈದಿದ್ದರು ಎನ್ನಲಾಗಿದೆ. ಬಂಗಾಳದ ಗಡಿಯ ಬಳಿಯಿರುವ, ದಟ್ಟ ಅರಣ್ಯಗಳು ಹಾಗೂ ಬೆಟ್ಟಗಳಿಂದ ಕೂಡಿರುವ ರಾಮಗಢ ಜಿಲ್ಲೆಯ ಗೋಲಾ ಬ್ಲಾಕ್ ಶಿಬು ಸೊರೇನ್ ಅವರ ಜನ್ಮ ಸ್ಥಳವೂ ಆಗಿದೆ.

ನವೆಂಬರ್ 23ರಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಹೇಮಂತ್ ಸೊರೇನ್ ರ ಜೆಎಂಎಂ ನೇತೃತ್ವದ ಮೈತ್ರಿಕೂಟವು ಸತತ ಎರಡನೆ ಬಾರಿ ಜಾರ್ಖಂಡ್ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿತ್ತು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು 56 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಹೇಮಂತ್ ಸೊರೇನ್ ರಿಂದ ಅಧಿಕಾರ ಕಸಿದುಕೊಳ್ಳಲು ತಾನು ನಡೆಸಿದ ತೀವ್ರ ಕಸರತ್ತಿನ ಹೊರತಾಗಿಯೂ ಬಿಜೆಪಿ ಕೇವಲ 24 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ಹೇಮಂತ್ ಸೊರೇನ್ ರ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಆರ್ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ಉನ್ನತ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News