ಒಪ್ಪಿಗೆಯ ವಿವಾಹೇತರ ಲೈಂಗಿಕತೆ ಅತ್ಯಾಚಾರವಲ್ಲ: ಸುಪ್ರೀಂ ಕೋರ್ಟ್

Update: 2024-11-28 02:44 GMT

ಸುಪ್ರೀಂ ಕೋರ್ಟ್ | PC : PTI

ಹೊಸದಿಲ್ಲಿ: ವಿವಾಹೇತರ ಸಂಬಂಧ ಹಳಸಿದ ಸಂದರ್ಭದಲ್ಲಿ ಪರಸ್ಪರ ಒಪ್ಪಿತ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವ ಪ್ರವೃತ್ತಿ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಹಲವು ವರ್ಷಗಳ ಕಾಲ ವಿವಾಹೇತರ ಸಂಬಂಧವನ್ನು ಹೊಂದಿರುವ ಮಹಿಳೆ, ವಿವಾಹದ ಭರಸೆ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪುರುಷನ ವಿರುದ್ಧ ಆರೋಪ ಹೊರಿಸುವಂತಿಲ್ಲ ಎಂದು ತೀರ್ಪು ನೀಡಿದೆ.

ಏಳು ವರ್ಷದ ಹಿಂದೆ ವನಿತಾ ಎಸ್ ಜಾಧವ್ ಎಂಬ ಮಹಿಳೆ ಹೇಶ್ ದಾಮು ಖಾರೆ ಎಂಬವರ ವಿರುದ್ಧ ಮುಂಬೈನ ಖರ್ಗಾರ್ ಠಾಣೆಯಲ್ಲಿ ದಾಖಲಿಸಿದ್ದ ಎಫ್ಐಆರ್ ವಜಾಗೊಳಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, "ಹಲವು ವರ್ಷಗಳ ಕಾಲ ಮುಂದುವರಿಯುವ ವಿವಾಹೇತರ ಸಂಬಂಧ ಹಳಸಿದ ಸಂದರ್ಭದಲ್ಲಿ ಅದನ್ನು ಅಪರಾಧೀಕರಣಗೊಳಿಸುವ ಪ್ರವೃತ್ತಿ ಕಳವಳಕಾರಿ" ಎಂದು ಅಭಿಪ್ರಾಯಪಟ್ಟಿದೆ.

ಒಪ್ಪಿತ ಲೈಂಗಿಕ ಸಂಬಂಧವನ್ನು ಆಧರಿಸಿ, ವಿವಾಹವಾಗುವ ಆಶ್ವಾಸನೆಯ ಉಲ್ಲಂಘನೆ ಬಗೆಗಿನ ದೂರನ್ನು ವಂಚನೆಗೆ ಒಳಗಾದ ಮಹಿಳೆ ಕ್ಲುಪ್ತ ಸಮಯಕ್ಕೆ ನೀಡಬೇಕೇ ವಿನಃ ಹಲವು ವರ್ಷಗಳ ಕಾಲ ಲೈಂಗಿಕ ಸಂಬಂಧವನ್ನು ಮುಂದುವರಿಸಿದ ಬಳಿಕ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿವಾಹಿತ ಖಾತೆ ಮತ್ತು ಜಾಧವ್ ಎಂಬ ವಿಧವೆ ನಡುವಿನ ಪ್ರೇಮಸಂಬಂಧ 2008ರಲ್ಲಿ ಆರಂಭವಾಗಿತ್ತು. ಆಕೆಯನ್ನು ವಿವಾಹವಾಗುವುದಾಗಿ ಖಾತೆ ಭರವಸೆ ನೀಡಿದ ಬಳಿಕ ತಾವು ಲೈಂಗಿಕ ಸಂಬಂಧ ಆರಂಭಿಸಿದ್ದಾಗಿ ಮಹಿಳೆ ವಾದಿಸಿದ್ದರು. ಜಾಧವ್ ವಿರುದ್ಧ ಖಾರೆಯವರ ಪತ್ನಿ ಸುಲಿಗೆ ಆರೋಪ ಹೊರಿಸಿ ದೂರು ನೀಡಿದ್ದರು. 2017ರ ಮಾರ್ಚ್ ನಲ್ಲಿ ಜಾಧವ್, ಖಾರೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಸುಧೀರ್ಘ ಅವಧಿ ವರೆಗೆ ಮಹಿಳೆ ಪ್ರಜ್ಞಾಪೂರ್ವಕವಾಗಿ ಒಪ್ಪಿತ ಲೈಂಗಿಕ ಸಂಬಂಧವನ್ನು ಮುಂದುವರಿಸಿದ ಸಂದರ್ಭದಲ್ಲಿ, ಅದನ್ನು ಖಾರೆ ನೀಡಿದ ವಿವಾಹದ ಭರವಸೆ ಹಿನ್ನೆಲೆಯಲ್ಲಿ ದೈಹಿಕ ಸಂಬಂಧ ಬೆಳೆಸಿದ್ದಾಗಿ ಪ್ರತಿಪಾದಿಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News