ಕೇರಳದ ಸಾಂಪ್ರದಾಯಿಕ ಸೀರೆ, ಕೈಯ್ಯಲ್ಲಿ ಸಂವಿಧಾನದ ಪ್ರತಿ: ಮೊದಲ ದಿನವೇ ಸಂಸತ್ತಿನಲ್ಲಿ ಗಮನಸೆಳೆದ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಜೂನಿಯರ್ ʼಇಂದಿರಾʼ ಎಂದೇ ಹೆಸರು ಪಡೆದಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದಿರಾ ಗಾಂಧಿಯ ನೆಚ್ಚಿನ ಮೊಮ್ಮಗಳ ಸಂಸತ್ತಿನ ಪ್ರವೇಶದಿಂದ ದಶಕಗಳ ಬಳಿಕ ಗಾಂಧಿ ಕುಟುಂಬದ ಮೂವರು ಸದಸ್ಯರಿಗೆ ಸಂಸತ್ತಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ.
ಕೇರಳದ ವಯನಾಡ್ ನಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದ ಪ್ರಿಯಾಂಕ ಗಾಂಧಿ ಗುರುವಾರ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಸಂಸದರು ಗೌರವದಿಂದ ಅವರನ್ನು ಸ್ವಾಗತಿಸಿದ್ದಾರೆ. ಸಂಸತ್ತಿಗೆ ತನ್ನ ಮೊದಲ ದಿನ ಕೇರಳದ ಸಾಂಪ್ರದಾಯಿಕ ಸೀರೆ ಬಿಳಿ ʼಕಸವು ಸಾರಿʼಯನ್ನು ಧರಿಸಿ ತಮ್ಮ ತಾಯಿ ಮತ್ತು ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಅವರೊಂದಿಗೆ ಸಂಸತ್ತಿಗೆ ಆಗಮಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪ್ರಮಾಣವಚನ ಸ್ವೀಕರಿಸಿದ್ದು, ಈ ವೇಳೆ ವಿಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ, ಪತಿ ರಾಬರ್ಟ್ ವಾದ್ರಾ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೂವರು ಕೂಡ ಈಗ ಸಂಸತ್ತಿನಲ್ಲಿದ್ದಾರೆ. ಗಾಂಧಿ ಕುಟುಂಬದ ಮೂವರಿಗೆ ದಶಕಗಳ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ.
ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಾತನಾಡಿದ ಪ್ರಿಯಾಂಕಾ ಗಾಂಧಿ, ನನಗೆ ತುಂಬಾ ಸಂತೋಷವಾಗಿದೆ. ವಯನಾಡಿನ ನನ್ನ ಸಹೋದ್ಯೋಗಿಗಳು ಇಂದು ನನ್ನ ಚುನಾವಣಾ ಪ್ರಮಾಣಪತ್ರವನ್ನು ತಂದಿದ್ದಾರೆ. ನನಗೆ ಇದು ಕೇವಲ ದಾಖಲೆಯಲ್ಲ, ಇದು ನಿಮ್ಮ ಪ್ರೀತಿ ಮತ್ತು ವಿಶ್ವಾಸದ ಸಂಕೇತವಾಗಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ವಯನಾಡಿನ ಜನತೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ನಡೆದ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಭಾಗವಹಿಸಿದ್ದರು.
ಪ್ರಿಯಾಂಕಾ ಗಾಂಧಿ 2019ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದರು. ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿತ್ತು. ಐದು ವರ್ಷಗಳ ನಂತರ ಪ್ರಿಯಾಂಕಾ ಗಾಂಧಿ ಅವರು ಚುನಾಯಿತ ಜನಪ್ರತಿನಿಧಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.