ಹಿಂದಿಯಲ್ಲಿ ಎಕ್ಸ್ ಖಾತೆಯನ್ನು ಪ್ರಾರಂಭಿಸಿದ RCB: ಅಭಿಮಾನಿಗಳ ಆಕ್ರೋಶ

Update: 2024-11-28 09:02 GMT
PC : X \  RCB 

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಿಂದಿಯಲ್ಲಿ ಎಕ್ಸ್ ಖಾತೆಯನ್ನು ಪ್ರಾರಂಭಿಸಿದ ಬೆನ್ನಿಗೇ, ಈ ಕುರಿತು ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಅಕ್ಟೋಬರ್ 24ರಂದು ಪ್ರಾರಂಭಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿಂದಿ ಎಕ್ಸ್ ಖಾತೆ, ಈವರೆಗೆ ಐದು ಟ್ವೀಟ್ ಗಳನ್ನು ಮಾತ್ರ ಮಾಡಿದೆ. ನವೆಂಬರ್ 28ರ ವೇಳೆಗೆ ಈ ಖಾತೆಯು ಸುಮಾರು 2,500 ಹಿಂಬಾಲಕರನ್ನು ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಳಿತ ಮಂಡಳಿಯ ಈ ನಡೆಯನ್ನು ಟೀಕಿಸಿರುವ ಕನ್ನಡ ಪರ ಗುಂಪುಗಳು ಹಾಗೂ ತಂಡದ ಅಭಿಮಾನಿಗಳು, ತಂಡದ ಆಡಳಿತ ಮಂಡಳಿಯು ಕನ್ನಡ ಮಾತನಾಡುವ ಫೋಲೋವರ್ಸ್‌ ಗಳ ಮೇಲೆ ಹಿಂದಿ ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಹಲವಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಾಮಾಧಾನವನ್ನು ಹೊರ ಹಾಕಿದ್ದು, ಈ ನಿರ್ಧಾರವನ್ನು ಆಡಳಿತ ಮಂಡಳಿ ಮರು ಪರಿಶೀಲಿಸಬೇಕು ಎಂದು ಓರ್ವ ಬಳಕೆದಾರರು ಆನ್ ಲೈನ್ ಅಭಿಯಾನಕ್ಕೂ ಚಾಲನೆ ನೀಡಿದ್ದಾರೆ.




 


ಈ ಸಾಮಾಜಿಕ ಮಾಧ್ಯಮ ಖಾತೆಯು ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಖರೀದಿಸಲಾಗಿರುವ ಆಟಗಾರರ AI ವಿಡಿಯೊಗಳನ್ನು ಹೊಂದಿದೆ. ಈ ಪೈಕಿ ಒಂದು ವಿಡಿಯೊದಲ್ಲಿ ಇಂಗ್ಲೆಂಡ್ ಬ್ಯಾಟರ್ ಲಿಯಾಮ್ ಲಿವಿಂಗ್ ಸ್ಟೋನ್ ತಮ್ಮ ತಂಡದ ಅಭಿಮಾನಿಗಳಿಗೆ ಹಿಂದಿಯಲ್ಲಿ ಶುಭಾಶಯ ಕೋರುತ್ತಿರುವುದನ್ನು ಕಾಣಬಹುದಾಗಿದೆ.

ಆದರೆ, ಕೆಲವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಆಡಳಿತ ಮಂಡಳಿಯ ಈ ನಡೆಯನ್ನು ಸಮರ್ಥಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಾಗತಿಕ ಮಟ್ಟದ ಅಭಿಮಾನಿಗಳಿರುವುದರಿಂದ, ಅದು ಭಾಷಾ ಗಡಿಯನ್ನು ಮೀರಿದೆ ಎಂದು ವಾದಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿಂದಿ ಖಾತೆಯು ತನ್ನ ತಂಡದ ವೈವಿಧ್ಯಮಯ ಬೆಂಬಲಿಗರಿಗೆ ಸೇವೆ ಒದಗಿಸುತ್ತಿದ್ದು, ಈ ನಡೆಯನ್ನು ವಿಭಜನಕಾರಿ ದೃಷ್ಟಿಯಲ್ಲಿ ನೋಡಬಾರದು ಎಂದೂ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News