ಸಂಸತ್ ಚಳಿಗಾಲದ ಅಧಿವೇಶನ | ವಿರೋಧ ಪಕ್ಷಗಳಿಂದ ಭಾರಿ ಪ್ರತಿಭಟನೆ: ಎರಡೂ ಸದನಗಳ ಮುಂದೂಡಿಕೆ
ಹೊಸದಿಲ್ಲಿ: ಅದಾನಿ ಹಾಗೂ ಉತ್ತರ ಪ್ರದೇಶದ ಸಂಭಲ್ ಹಿಂಸಾಚಾರ ಮತ್ತಿತರ ವಿಷಯಗಳ ಕುರಿತು ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳೆರಡಲ್ಲೂ ಭಾರಿ ಪ್ರತಿಭಟನೆ ನಡೆಸಿದ್ದರಿಂದ, ಎರಡೂ ಸದನಗಳನ್ನು ನಾಳೆಗೆ ಮುಂದೂಡಲಾಯಿತು.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರ ಹಾಗೂ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ನೂತನವಾಗಿ ಚುನಾಯಿತರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರವೀಂದ್ರ ವಸಂತ ರಾವ್ ಚವಾಣ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಅದಾನಿ ಸಮೂಹದ ಮೇಲಿನ ಆರೋಪ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಪ್ರಸ್ತಾಪಿಸಿದರು. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಕೆಲವು ಸದಸ್ಯರು ಸದನದ ಬಾವಿಗೆ ಧಾವಿಸಿದರೆ, ಉಳಿದ ವಿರೋಧ ಪಕ್ಷಗಳ ಸದಸ್ಯರು ತಮ್ಮ ಮೇಜುಗಳ ಬಳಿ ನಿಂತು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಸದನ ಗದ್ದಲದ ಗೂಡಾಯಿತು. ಹೀಗಾಗಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳೆರಡನ್ನೂ ಮಧ್ಯಾಹ್ನ 12 ಗಂಟೆವರೆಗೂ ಮುಂದೂಡಲಾಯಿತು.
ಆದರೆ, ಸದನದ ಕಲಾಪ ಪುನಾರಂಭಗೊಂಡಾಗಲೂ ವಿರೋಧ ಪಕ್ಷಗಳ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ, ಎರಡೂ ಸದನಗಳ ಕಲಾಪವನ್ನು ನಾಳೆ(ಶುಕ್ರವಾರ)ಗೆ ಮುಂದೂಡಲಾಯಿತು.