ಪತ್ರಕರ್ತೆ ರಾಣಾ ಅಯ್ಯೂಬ್ ಮೊಬೈಲ್ ನಂಬರ್ ಸೋರಿಕೆ ಮಾಡಿದ ಬಲಪಂಥೀಯ ಖಾತೆ : ಆನ್ ಲೈನ್ ನಲ್ಲಿ ಕಿರುಕುಳ
ಹೊಸದಿಲ್ಲಿ : ನನ್ನ ಮೊಬೈಲ್ ನಂಬರನ್ನು ಬಲಪಂಥೀಯ ಎಕ್ಸ್ ಖಾತೆ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ ಬಳಿಕ ತೀವ್ರ ಕಿರುಕುಳ ಎದುರಿಸಿದ್ದೇನೆ ಎಂದು ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಆರೋಪಿಸಿದ್ದಾರೆ.
‘The Hindutva Knight’ (ಹಿಂದುತ್ವ ನೈಟ್) ಎಂಬ ಎಕ್ಸ್ ಖಾತೆಯಲ್ಲಿ ರಾಣಾ ಅಯೂಬ್ ಅವರ ಪೋನ್ ನಂಬರ್ ಹಂಚಿಕೊಂಡ ಬಳಿಕ ರಾತ್ರಿಯಿಡೀ ಅವರಿಗೆ ಕರೆಗಳು, ವೀಡಿಯೊ ಕರೆಗಳು ಮತ್ತು ಅಶ್ಲೀಲ ಸಂದೇಶಗಳು ಬಂದಿವೆ ಎಂದು ವರದಿಯಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಣಾ ಅಯ್ಯೂಬ್, "ನನಗೆ ಮತ್ತು ನನ್ನ ಕುಟುಂಬಕ್ಕೆ ಭಯಾನಕ ರಾತ್ರಿಯಾಗಿದೆ" ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಗೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ.
ರಾತ್ರಿ 1 ಗಂಟೆ ಸುಮಾರಿಗೆ ಬಲಪಂಥೀಯ ಖಾತೆ ಎಕ್ಸ್ ನಲ್ಲಿ ನನ್ನ ಪೋನ್ ಸಂಖ್ಯೆಯನ್ನು ಪೋಸ್ಟ್ ಮಾಡಿದೆ. ನನಗೆ ಸಂದೇಶ ಕಳುಹಿಸಲು ಅನುಯಾಯಿಗಳಿಗೆ ಸೂಚಿಸಿದೆ. ರಾತ್ರಿಯಿಡೀ ನನ್ನ ಫೋನ್ ರಿಂಗ್ ಆಗುತ್ತಿತ್ತು. ನನಗೆ ವೀಡಿಯೊ ಕರೆಗಳು, ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ರಾಣಾ ಅಯ್ಯೂಬ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಚಂದನ್ ಶರ್ಮಾ ಎಂಬಾತ "ಹಿಂದುತ್ವ ನೈಟ್" ಎಂಬ ಎಕ್ಸ್ ಖಾತೆಯಲ್ಲಿ ರಾಣಾ ಅಯ್ಯೂಬ್ ಅವರ ಫೋನ್ ಸಂಖ್ಯೆಯನ್ನು ಉಲ್ಲೇಖಿಸಿ ಅವರಿಗೆ ಕರೆ ಮಾಡುವಂತೆ, ಸಂದೇಶ ಕಳುಹಿಸುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಏಷ್ಯಾ ಪತ್ರಕರ್ತರನ್ನು ರಕ್ಷಿಸುವ ಸಮಿತಿಯ ಮುಖ್ಯಸ್ಥ ಬೆಹ್ ಲಿಹ್ ಯಿ ಪ್ರತಿಕ್ರಿಯಿಸಿದ್ದು, ರಾಣಾ ಅಯ್ಯೂಬ್ ಅವರ ಕಾರ್ಯವನ್ನು ಶ್ಲಾಘಿಸುತ್ತಾ ಅವರ ವಿರುದ್ಧದ ನಿರಂತರ ದಬ್ಬಾಳಿಕೆಯನ್ನು ನಿಲ್ಲಿಸಬೇಕು ಎಂದು ಮುಂಬೈ ಪೊಲೀಸರಿಗೆ ಆಗ್ರಹಿಸಿದ್ದಾರೆ.
ರಾಣಾ ಅಯ್ಯೂಬ್ ಭಾರತೀಯ ಪತ್ರಕರ್ತೆ ಮತ್ತು “ಗುಜರಾತ್ ಫೈಲ್ಸ್: ಅನ್ಯಾಟಮಿ ಆಫ್ ಎ ಕವರ್ ಅಪ್" ನ ಲೇಖಕರಾಗಿದ್ದಾರೆ. ಅವರು ತೆಹಲ್ಕಾದಲ್ಲಿ ಸಂಪಾದಕರಾಗಿದ್ದರು. ಅವರು ಧಾರ್ಮಿಕ ಹಿಂಸಾಚಾರ, ಹತ್ಯೆಗಳು ಮತ್ತು ಬಂಡಾಯದ ಬಗ್ಗೆ ವರದಿ ಮಾಡಿ ಗಮನ ಸೆಳೆದಿದ್ದರು.