ಮಣಿಪುರ: ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ

Update: 2023-07-20 04:23 GMT

ಇಂಫಾಲ: ಮಣಿಪುರದಲ್ಲಿ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ನಗ್ನ ಮೆರವಣಿಗೆ ನಡೆಸಿದ ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಆಗುತ್ತಿದ್ದು, ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಇಬ್ಬರು ಮಹಿಳೆಯರ ಮೇಲೆ ಹೊಲದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಬುಡಕಟ್ಟು ಸಂಘಟನೆ ಆರೋಪಿಸಿದೆ. ಈ ಘಟನೆ ಇಂಫಾಲದಿಂದ 35 ಕಿ.ಮೀ.ದೂರದ ಕಂಗ್ ಪ್ರೊಕ್ವಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದೆ ಎಂದು ಇಂಡಿಜೀನಿಯಸ್ ಟೈಬಲ್ಡರ್ಸ್ ಫಾರಂ (ಐಟಿಎಲ್ಎಫ್) ಹೇಳಿಕೆಯಲ್ಲಿ ತಿಳಿಸಿದೆ.

“ಕಂಗ್ ಪೊಕ್ಷಿ ಜಿಲ್ಲೆಯಲ್ಲಿ ಮೇ 4ರಂದು ನಡೆದ ಘಟನೆಯ ವೀಡಿಯೊದಲ್ಲಿ ತಮ್ಮನ್ನು ಸೆರೆ ಹಿಡಿದವರ ಮಂದೆ ಗೋಳಿಡುತ್ತಿರುವ ಹಾಗೂ ಬಿಡುಗಡೆ ಮಾಡುವಂತೆ ಮೊರೆ ಇಡುತ್ತಿರುವ ಅಸಹಾಯಕ ಮಹಿಳೆಯರಿಗೆ ದುಷ್ಕರ್ಮಿಗಳು ನಿರಂತರ ಕಿರುಕುಳ ನೀಡುತ್ತಿರುವುದು ದಾಖಲಾಗಿದೆ'' ಎಂದು ಐಟಿಎಲ್ಎಫ್ನ ಹೇಳಿಕೆ ತಿಳಿಸಿದೆ.

“ಸಂತ್ರಸ್ತರನ್ನು ಗುರುತಿಸಬಹುದಾದ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಮಾಲಕ ದುಷ್ಕರ್ಮಿಗಳ ಗುಂಪು ಅಮಾಯಕ ಮಹಿಳೆಯರ ಸ್ಥಿತಿ ಇನ್ನಷ್ಟು ಶೋಚ ನೀಯವಾಗಲು ಕಾರಣವಾಗಿದೆ'' ಎಂದು ಐಟಿಎಲ್ಎಫ್ ಹೇಳಿದೆ. ಅಲ್ಲದೆ, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗವನ್ನು ಅದು ಆಗ್ರಹಿಸಿದೆ.

ತಾವು ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದಾಖಲಿಸಿದ್ದೇವೆ ಎಂದು ಮಣಿಪುರ ಪೊಲೀಸರು ಬುಧವಾರ ಟ್ವಿಟ್ ಮಾಡಿದ್ದಾರೆ. “ಮೇ 4ರಂದು ಅನಾಮಿಕ ಸಶಸ್ತ್ರ ದುಷ್ಕಮಿಗಳು ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ನಡೆಸಿದ ವೈರಲ್ ವೀಡಿಯೊಗೆ ಸಂಬಂಧಿಸಿ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ರಾಜ್ಯ ಪೊಲೀಸರು ಎಲ್ಲಾ ಕ್ರಮ ಕೈಗೊಂಡಿದ್ದಾರೆ'' ಎಂದು ಮಣಿಪುರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಈ ಘಟನೆ ಕುರಿತು ರಾಜಕೀಯ ನಾಯಕರು ಹಾಗೂ ಇತರರು ಸಾಮಾಜಿಕ ಮಾಧ್ಯಮದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಹೇಯ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News