ಬಹಿಷ್ಕಾರ ಕರೆ ನೀಡಿದ್ದಕ್ಕೆ ಫೆಲೆಸ್ತೀನ್ ಪರ ಗುಂಪಿನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮೆಕ್ ಡೊನಾಲ್ಡ್ಸ್
ಹೊಸದಿಲ್ಲಿ: ಸರಣಿ ಫಾಸ್ಟ್‌ಫುಡ್ ಮಳಿಗೆಗಳನ್ನು ಹೊಂದಿರುವ ಮೆಕ್‌ಡೊನಾಲ್ಡ್ಸ್ ಮಲೇಶಿಯಾವು ಇಸ್ರೇಲ್ ಅನ್ನು ಬೆಂಬಲಿಸುವ ಕಂಪನಿಗಳನ್ನು ಬಹಿಷ್ಕರಿಸುವಂತೆ ಕರೆಗಳನ್ನು ನೀಡಿದ್ದಕ್ಕಾಗಿ ಫೆಲೆಸ್ತೀನ್ ಪರ ಗುಂಪು ಬಿಡಿಎಸ್ ಮಲೇಶಿಯಾದಿಂದ ಆರು ಮಿಲಿಯನ್ ರಿಂಗಿಟ್ (1.3 ಮಿಲಿಯನ್ ಡಾಲರ್)ಗಳ ಮಾನನಷ್ಟ ಪರಿಹಾರವನ್ನು ಕೋರಿ ಮೊಕದ್ದಮೆಯನ್ನು ದಾಖಲಿಸಿದೆ.
"ಬಿಡಿಎಸ್ ಮಲೇಶಿಯಾ ವಿರುದ್ಧ ದಾವೆಯು ಕಾನೂನಿಗನುಗುಣವಾಗಿ ನಮ್ಮ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ" ಎಂದು ಮೆಕ್‌ಡೊನಾಲ್ಡ್ಸ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
"ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಾನು ಬೆಂಬಲಿಸುವುದಿಲ್ಲ ಅಥವಾ ಕ್ಷಮಿಸುವುದೂ ಇಲ್ಲ ಎಂದು ಹೇಳಿರುವ ಮೆಕ್‌ಡೊನಾಲ್ಡ್ಸ್ ಮಲೇಶಿಯಾ, ಬಹಿಷ್ಕಾರ ಕರೆಯು ವೈಯಕ್ತಿಕ ನಿರ್ಧಾರವಾಗಿದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ಅದನ್ನು ಗೌರವಿಸುತ್ತೇವೆ, ಆದರೆ ಅದು ಸತ್ಯಾಂಶಗಳನ್ನು ಆಧರಿಸಿರಬೇಕು, ಸುಳ್ಳು ಆರೋಪಗಳನ್ನಲ್ಲ ಎಂದು ನಾವು ನಂಬಿದ್ದೇವೆ" ಎಂದು ತಿಳಿಸಿದೆ.
"ಈ ಮಾನನಷ್ಟ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ" ಎಂದು ಬಿಡಿಎಸ್ ಮಲೇಶಿಯಾ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.
ಬಿಡಿಎಸ್ ಮಲೇಶಿಯಾ 2005ರಲ್ಲಿ ಫೆಲೆಸ್ತೀನಿ ನಾಗರಿಕ ಸಮಾಜ ಸಂಸ್ಥೆಗಳು ಆರಂಭಿಸಿದ್ದ ಜಾಗತಿಕ ಬಹಿಷ್ಕಾರ, ಹೂಡಿಕೆ ಹಿಂದೆಗೆತ ಮತ್ತು ನಿರ್ಬಂಧಗಳ ಆಂದೋಲನದ ಭಾಗವಾಗಿದೆ.
ಆಂದೋಲನವು ಇಸ್ರೇಲ್ ಫೆಲೆಸ್ತೀನಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗಾಗಿ ಅದರ ವಿರುದ್ಧ ರಾಜಕೀಯ ಮತ್ತು ಆರ್ಥಿಕ ಕ್ರಮಗಳನ್ನು ಪ್ರತಿಪಾದಿಸುತ್ತದೆ.
ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಬಿಡಿಎಸ್ ಮಲೇಶಿಯಾ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಮತ್ತು ಝರಾ ಸೇರಿದಂತೆ ಪಾಶ್ಚಾತ್ಯ ಬ್ರ್ಯಾಂಡ್‌ಗಳನ್ನು ಬಹಿಷ್ಕರಿಸುವಂತೆ ಮಲೇಶಿಯಾದ ಜನರಿಗೆ ಕರೆಗಳನ್ನು ತೀವ್ರಗೊಳಿಸಿದೆ. ಈ ಕಂಪನಿಗಳು ಫೆಲೆಸ್ತೀನಿಗಳ ಮೇಲೆ ಇಸ್ರೇಲಿ ದೌರ್ಜನ್ಯಗಳಲ್ಲಿ ಶಾಮೀಲಾಗಿವೆ ಎಂದು ಅದು ಆರೋಪಿಸಿದೆ.