ಮಹಿಳೆ ಸೇವಿಸಿದ ಔಷಧಿಗಳಿಂದ ಭ್ರೂಣಕ್ಕೆ ಬಾಧಕ? ಪರಿಶೀಲಿಸಲು ಏಮ್ಸ್‌ಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ : ತನ್ನ 26 ವಾರದ ಭ್ರೂಣವನ್ನು ವೈದ್ಯಕೀಯವಾಗಿ ತೆಗೆದುಹಾಕುವುದಕ್ಕೆ ಅನುಮತಿ ಕೋರಿ ಅರ್ಜಿಸಲ್ಲಿಸಿರುವ ಮಹಿಳೆಯು ‘ಪೋಸ್ಟ್ಪಾರ್ಟಂ ಸೈಕೋಸಿಸ್’(ಬಾಣಂತಿ ಸನ್ನಿ) ಔಷಧಿಗಳನ್ನು ಸೇವಿಸಿದ್ದಾಳೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನಿರ್ದೇಶನ ನೀಡಿದೆ.
ಅರ್ಜಿದಾರೆಯ ಮಾನಸಿಕ ಹಾಗೂ ದೈಹಿಕ ಪರಿಸ್ಥಿತಿಯ ಕುರಿತಾಗಿಯೂ ಸ್ವತಂತ್ರವಾದ ಮೌಲ್ಯಮಾಪನ ನಡೆಸುವಂತೆಯೂ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಹಾಗೂ ಜೆ.ಬಿ. ಪರ್ದಿವಾಲಾ ತಿಳಿಸಿದ್ದಾರೆ.
ಅರ್ಜಿದಾರೆಯ ಗರ್ಭಧಾರಣೆಯ ಅವಸ್ಥೆಗೆ ಅನುಗುಣವಾದ ಹಾಗೂ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರದೆ ಇರುವಂತಹ ಪರ್ಯಾಯ ಔಷಧಿಗಳು ಲಭ್ಯವಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಪೀಠ ತಿಳಿಸಿದೆ.
ಒಂದು ವೇಳೆ ಗರ್ಭಧಾರಣೆಯನ್ನು ಮುಂದುವರಿಸುವುದರಿಂದ ಗರ್ಭಿಣಿಯ ಜೀವಕ್ಕೆ ಅಪಾಯವಿದೆ ಅಥವಾ ಭ್ರೂಣದಲ್ಲಿ ಗಣನೀಯವಾದ ಅಸಹಜತೆಗಳಿವೆ ಎಂಬುದನ್ನು ವೈದ್ಯರುಗಳ ಮಂಡಳಿಯು ಒಪ್ಪಿಕೊಂಡಲ್ಲಿ, ಗರ್ಭಧಾರಣೆಯಾದ 24 ವಾರಗಳ ಆನಂತರವೂ ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ‘ ಭ್ರೂಣವನ್ನು ತೆಗೆದುಹಾಕಲು’ ಅನುಮತಿ ನೀಡಲಾಗುತ್ತದೆ.
ಇದು ತನ್ನ ಮೂರನೇ ಸಲದ ಗರ್ಭಧಾರಣೆಯಾಗಿದ್ದು, ತಾನು 2022 ಆಕ್ಟೋಬರ್ ನಲ್ಲಿ ಎರಡನೆ ಮಗುವನ್ನು ಹೆತ್ತಾಗಿನಿಂದ ಬಾಣಂತಿ ಸನ್ನಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಈ ಕಾರಣಕ್ಕಾಗಿ ಹಾಗೂ ತನ್ನ ಹಣಕಾಸು ಸ್ಥಿತಿಯನ್ನು ಕೂಡಾ ಗಮನದಲ್ಲಿರಿಸಿಕೊಂಡು ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಮಹಿಳೆ ಅರ್ಜಿ ಸಲ್ಲಿಸಿದ್ದರು.