ಭಾರತದ ನೌಕಾಪಡೆಗೆ ನಿಯೋಜನೆಗೊಂಡ ಎಂಎಚ್- 60 ರೋಮಿಯೊ ಹೆಲಿಕಾಪ್ಟರ್
ಹೊಸದಿಲ್ಲಿ: ಎಂಎಚ್-60 ರೋಮಿಯೊ ಹೆಲಿಕಾಪ್ಟರ್ ಗಳನ್ನು ಬುಧವಾರ ಕೊಚ್ಚಿಯ ನೌಕಾಪಡೆಯ ವಾಯು ನಿಲ್ದಾಣವಾದ ಐಎನ್ಎಸ್ ಗರುಡದಲ್ಲಿ ನಿಯೋಜಿಸಲಾಯಿತು. ಭಾರತೀಯ ನೌಕಾಪಡೆ ವಾಯು ಸ್ಕ್ವಾಡ್ರನ್ 334 ನೌಕಾಪಡೆಯ ನೂತನ ವಾಯು ಸ್ಕ್ರಾಡ್ರನ್ ಆಗಿದ್ದು, ಜಲಾಂತರ್ಗಾಮಿ ಬೇಟೆಗಾರನಾದ ಎಂಎಚ್-60 ಆರ್ ಹೆಲಿಕಾಪ್ಟರ್ ಗೆ ತವರು ಮನೆಯೂ ಆಗಿದೆ. ಕ್ಯಾಪ್ಟನ್ ಎಂ.ಅಭಿಷೇಕ್ ರಾಮ್ ಐಎನ್ಎಎಸ್ 334 ಸ್ಕ್ವಾಡ್ರನ್ ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ ಎಂದು ndtv ವರದಿ ಮಾಡಿದೆ.
ಲಾಕ್ ಹೀಡ್ ಮಾರ್ಟಿನ್ ಆ್ಯಂಡ್ ಸಿಕೋರ್ ಸ್ಕೈ ಉತ್ಪಾದಿಸಿರುವ ಎಂಎಚ್-60ಆರ್ ಹೆಲಿಕಾಪ್ಟರ್ ಗಳು ಅಮೆರಿಕಾದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗಳ ನೂತನ ನೌಕಾಪಡೆ ಮಾದರಿಗಳಾಗಿವೆ. ಇಡೀ ವಿಶ್ವದಲ್ಲಿ ಕಾರ್ಯಾಚರಣೆಯಲ್ಲಿರುವ ಜಲಾಂತರ್ಗಾಮಿ ನಿಗ್ರಹ ಹೆಲಿಕಾಪ್ಟರ್ ಗಳ ಪೈಕಿ ಒಂದಾಗಿರುವ ಎಂಎಚ್-60ಆರ್ ಹೆಲಿಕಾಪ್ಟರ್, ತನ್ನ ಜಲಾಂತರ್ಗಾಮಿ ನಿಗ್ರಹ, ನೆಲಮಟ್ಟದ ಸಾಮರ್ಥ್ಯ, ನಿರ್ದೇಶನ ಮತ್ತು ನಿಯಂತ್ರಣ ಸಾಮರ್ಥ್ಯಗಳಿಂದ ಆಟದ ದಿಕ್ಕನ್ನೇ ಬದಲಿಸಬಲ್ಲ ಹೆಲಿಕಾಪ್ಟರ್ ಎಂದು ಪರಿಗಣಿಸಲಾಗಿದೆ.
“ಭಾರತೀಯ ನೌಕಾಪಡೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಾಗರ ವ್ಯಾಪ್ತಿಯಲ್ಲಿ ದೇಶದ ಹಿತಾಸಕ್ತಿಯ ರಕ್ಷಣೆ, ಸಂರಕ್ಷಣೆ, ಉತ್ತೇಜನ ಹಾಗೂ ಮುನ್ನಡೆಸುವ ಕುರಿತು ನಾವು ರಾಜಿರಹಿತ ಬದ್ಧತೆ ಹೊಂದಿದ್ದೇವೆ. ಬಹು ಕಾರ್ಯಾಚರಣೆ ಸಾಮರ್ಥ್ಯದ ಎಂಎಚ್ 60ಆರ್ ಹೆಲಿಕಾಪ್ಟರ್ ಗಳು ನಮ್ಮ ಸಾಗರ ವ್ಯಾಪ್ತಿಯ ಮೇಲೆ ನಿಗಾವಣೆ ಹಾಗೂ ಜಲಾಂತರ್ಗಾಮಿ ನಿಗ್ರಹ ಯುದ್ಧ ಸಾಮರ್ಥ್ಯವನ್ನು ವೃದ್ಧಿಸಲಿವೆ” ಎಂದು ನಿಯೋಜನೆಯ ಕಾರ್ಯಕ್ರಮದಲ್ಲಿ ನೌಕಾಪಡೆ ಸಿಬ್ಬಂದಿಗಳ ಮುಖ್ಯಸ್ಥರಾದ ಅಡ್ಮಿರಲ್ ಆರ್. ಹರಿಕುಮಾರ್ ಹೇಳಿದ್ದಾರೆ.
ಅಮೆರಿಕಾದೊಂದಿಗಿನ ಸರಕಾರಗಳ ನಡುವೆ ನಡೆದಿರುವ 905 ದಶಲಕ್ಷ ಡಾಲರ್ ಒಪ್ಪಂದದಲ್ಲಿ ಭಾರತವು 24 ಎಂಎಚ್-60ಆರ್ ಹೆಲಿಕಾಪ್ಟರ್ ಗಳಿಗೆ ಖರೀದಿಗೆ ಆದೇಶ ನೀಡಿದೆ. ಅದಕ್ಕೆ ಪ್ರತಿಯಾಗಿ 2021ರಲ್ಲಿ ಔಪಚಾರಿಕವಾಗಿ ಎರಡು ಹೆಲಿಕಾಪ್ಟರ್ ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು. ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿನ ನೌಕಾಪಡೆಯ ಹೆಚ್ಚುತ್ತಿರುವ ಕಾರ್ಯಾಚರಣೆಯ ಅಗತ್ಯತೆಗಳು ಹಾಗೂ ಜಲಾಂತರ್ಗಾಮಿ ನಿಗ್ರಹ, ನೆಲಮಟ್ಟದ ಕಾರ್ಯಾಚರಣೆಗಳು, ಪತ್ತೆ ಮತ್ತು ರಕ್ಷಣೆ ಕಾರ್ಯಾಚರಣೆ ಇತ್ಯಾದಿಗಳಿಗೆ ಪ್ರಮುಖ ನೆಲೆಯಾದ ಸೀ ಕಿಂಗ್ ನೌಕೆಗೆ ವಯಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ನೌಕಾಪಡೆಗೆ ಸೀ ಹಾಕ್ ಹೆಲಿಕಾಪ್ಟರ್ ಗಳನ್ನು ನಿಯೋಜಿಸುತ್ತಿರುವುದು ಮಹತ್ವದ್ದಾಗಿದೆ.
1971ರಿಂದ ಸೇವೆಯಲ್ಲಿರುವ ವೆಸ್ಟ್ ಲ್ಯಾಂಡ್ ಸೀ ಕಿಂಗ್ ಹೆಲಿಕಾಪ್ಟರ್ ಗಳ ಜಾಗವನ್ನು ಸೀಹಾಕ್ ಎಂದೇ ಚಿರಪರಿಚಿತವಾಗಿರುವ ಎಂಎಚ್-60 ಆರ್ ಹೆಲಿಕಾಪ್ಟರ್ ಗಳು ತುಂಬಲಿವೆ. ವೆಸ್ಟ್ ಲ್ಯಾಂಡ್ ಸೀ ಕಿಂಗ್ ಹೆಲಿಕಾಪ್ಟರ್ ಗಳನ್ನು 1971ರ ಯುದ್ಧದಲ್ಲಿ ಮುಂಬೈನಲ್ಲಿ ಇರಿಸಲಾಗಿತ್ತು. ಬಂದರಿನ ಆಚೆಯ ಜಲಾಂತರ್ಗಾಮಿ ನಿಗ್ರಹ ಗಸ್ತಿಗಾಗಿ ನಿಯೋಜಿಸಲಾಗಿತ್ತು. ಜಲಾಂತರ್ಗಾಮಿ ಯುದ್ಧ ನಿಗ್ರಹದಲ್ಲಿ ಸೀ ಕಿಂಗ್ ಹೆಲಿಕಾಪ್ಟರ್ ಗಳು ಉಪಯುಕ್ತ ಎಂದು ಸಾಬೀತು ಪಡಿಸಿದ್ದು, ಸುಮಾರು 50 ವರ್ಷಗಳ ನಂತರ ಎಂಎಚ್-60ಆರ್ ಹೆಲಿಕಾಪ್ಟರ್ ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಸೀ ಕಿಂಗ್ ಹೆಲಿಕಾಪ್ಟರ್ ಗಳನ್ನು ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಲ್ಲೂ ಕಾರ್ಯಾಚರಣೆಗಾಗಿ ಬಳಸಲಾಗಿತ್ತು.
ಸೇನಾ ಮತ್ತು ವಾಣಿಜ್ಯ ಹೆಲಿಕಾಪ್ಟರ್ ಗಳನ್ನು ತಯಾರಿಸುವುದರಲ್ಲಿ ಸಿಕೋರ್ ಸ್ಕೈ ಸಂಸ್ಥೆ ಜಾಗತಿಕ ನಾಯಕನಾಗಿದೆ. ಅಮೆರಿಕಾ ಸೇನಾಪಡೆಯ ಎಲ್ಲ ಐದು ವಿಭಾಗಗಳೂ ಅದರ ಹೆಲಿಕಾಪ್ಟರ್ ಗಳನ್ನು ಬಳಸುತ್ತಿದ್ದು, ಸೀ ಹಾಕ್ಸ್, ಸೀ ಕಿಂಗ್ ಹಾಗೂ ಸ್ಟಾಲಿಯನ್ ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿರುವ ಹೆಗ್ಗಳಿಕೆ ಸಿಕೋರ್ ಸ್ಕೈ ಸಂಸ್ಥೆಯದ್ದಾಗಿದೆ. ತನ್ನ ನೆಲಮಟ್ಟದ ಯುದ್ಧ ನಿರೋಧಕ ಸಾಮರ್ಥ್ಯಕ್ಕೆ ಹೆಸರಾದ ಎಂಎಚ್-60ಆರ್ ಹೆಲಿಕಾಪ್ಟರ್ ಗಳನ್ನು 2002ರಲ್ಲಿ ಅಮೆರಿಕಾದ ನೌಕಾಪಡೆಯು ಸೇರ್ಪಡೆ ಮಾಡಿಕೊಂಡಿತ್ತು. ರೋಮಿಯೊ ಸೀ ಹಾಕ್ ಸರಣಿಯ ಹೊಸ ಮಾದರಿಯಾಗಿದ್ದು, ಸಾಮಾನ್ಯ ಡಿಡಿಜಿಟಲ್ ಕಾಕ್ ಪಿಟ್ ಹೊಂದಿದೆ. ಇದರಿಂದ ಪೈಲಟ್ ಗಳು ಎಂಎಚ್-60ಆರ್/ಎಸ್ ಎರಡೂ ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಿಸುವುದು ಸುಲಭವಾಗಿದೆ.
ರೋಮಿಯೊ ಮಾದರಿಯು ಅತ್ಯುತ್ಕೃಷ್ಟವಾಗಿದ್ದು, ಅಂದಾಜು 700 ಕಿಮೀ ಕಾರ್ಯಾಚರಣಾ ವ್ಯಾಪ್ತಿಯನ್ನು ಹೊಂದಿರುವುದರಿಂದ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿನ ನೌಕಾಪಡೆಯ ಕಾರ್ಯಾಚರಣೆ ಅಗತ್ಯತೆಗಳಿಗೆ ಸೂಕ್ತ ಆಯ್ಕೆಯಾಗಿದೆ. ನೌಕಾಪಡೆಯು 2.5 ದಶಲಕ್ಷ ನಾಟಿಕಲ್ ಮೈಲುಗಳ ಗಸ್ತು ನಡೆಸಲಿದ್ದು, ಭಾರತದ ಉಪ ಖಂಡದಲ್ಲಿ ಇದನ್ನು ನೀಲಿ ನೀರಿನ ನೌಕಾಪಡೆ ಎಂಬ ಹಣೆಪಟ್ಟಿಯನ್ನು ಹೊಂದಿದೆ. ಹೀಗಾಗಿ ಭಾರತವು ದಕ್ಷ ಹೆಲಿಕಾಪ್ಟರ್ ಗಳ ದೊಡ್ಡ ಪ್ರಮಾಣದ ಪಡೆಯ ಬೇಡಿಕೆ ಹೊಂದಿದೆ.
Photo : NDTV
ಈ ಹೆಲಿಕಾಪ್ಟರ್ ಗಳು ಜಲಾಂತರ್ಗಾಮಿಗಳನ್ನು ಗುರುತಿಸಿ, ಪತ್ತೆ ಹಚ್ಚಿ, ಬೇಟೆಯಾಡಬಲ್ಲವು. ಈ ಹೆಲಿಕಾಪ್ಟರ್ ಗಳ ರಡಾರ್ ಅನ್ನು ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿದೆ. ಒತ್ತೆ ಜಲಾಂತರ್ಗಾಮಿಗಳು, ಕ್ಷಿಪಣಿ ಬಗ್ಗೆ ಎಚ್ಚರಿಸುವ ವಿದ್ಯುನ್ಮಾನ ಯುದ್ಧ ಸಾಮರ್ಥ್ಯ, ಇನ್ಫ್ರಾರೆಡ್ ಜಾಮರ್ ಗಳು, ಬಿಸಿಯನ್ನು ಬಯಸುವ ಕ್ಷಿಪಣಿಗಳ ವಿರುದ್ಧ ಚಾಫ್ ಮತ್ತು ಡೆಕಾಯ್ ಡಿಸ್ಪೆನ್ಸರ್ ಗಳನ್ನು ಪತ್ತೆ ಹಚ್ಚುವ ರಡಾರ್ ಪೆರಿಸ್ಕೋಪ್ ಅನ್ನು ಹೊಂದಿವೆ. ಇನ್ವರ್ಸ್ ಸಿಂಥಟಿಕ್ ಅಪೆಚರ್ ರಡಾರ್ ಗಳು ಶತ್ರು ರಾಷ್ಟ್ರದ ಜಲಾಂತರ್ಗಾಮಿಗಳ ಸಾಗಾಟವನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದ್ದು, ಟಾರ್ಪೆಡೋಸ್ ದಾಳಿ ನಡೆಸಬಲ್ಲವಾಗಿವೆ. ನೆಲಮಟ್ಟದ ನೌಕೆಗಳ ವಿರುದ್ಧ ಆಕಾಶ-ನೆಲಮಟ್ಟದ ದಾಳಿಯ ಸಾಮರ್ಥ್ಯದಿಂದ ಈ ಹೆಲಿಕಾಪ್ಟರ್ ಗಳು ಹೆಚ್ಚು ಉಪಯುಕ್ತವಾಗಿವೆ.
ಈ ಹೆಲಿಕಾಪ್ಟರ್ ಗಳನ್ನು ವಿಮಾನ ವಾಹಕ, ವಿಧ್ವಂಸಕಗಳು ಹಾಗೂ ಇನ್ನಿತರ ಯುದ್ಧ ನೌಕೆಗಳಲ್ಲಿ ಕಾರ್ಯಾಚರಿಸಬಹುದಾಗಿದೆ. ಸೀ ಹಾಕ್ ಮಾದರಿಗಳಲ್ಲಿ ಎಂಎಚ್-60ಆರ್ ಹೆಲಿಕಾಪ್ಟರ್ ಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವು ಅತ್ಯಂತ ಅಗ್ಗವಾಗಿದೆ ಎಂದು ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಯು ಪ್ರತಿಪಾದಿಸಿದೆ.