ಮತ ಎಣಿಕೆ ದಿನಾಂಕ ಬದಲಿಸಲು ಚುನಾವಣಾ ಆಯೋಗಕ್ಕೆ ಮಿಜೋರಾಂ ಪಕ್ಷಗಳ ಮನವಿ

Update: 2023-10-12 16:54 GMT

Photo : PTI

ಐಝ್ವಾಲ್: ಮತ ಎಣಿಕೆ ನಿಗದಿಯಾಗಿರುವ ಡಿಸೆಂಬರ್ 3 ರವಿವಾರ ಆಗಿರುವುದರಿಂದ ಅದನ್ನು ಬೇರೆ ದಿನ ನಡೆಸುವಂತೆ ಕ್ರೈಸ್ತ ಬಹುಸಂಖ್ಯಾತ ರಾಜ್ಯ ಮಿಜೋರಾಂನ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.

ಈ ಸಂಬಂಧ ಬಿಜೆಪಿ, ಕಾಂಗ್ರೆಸ್, ಆಡಳಿತಾರೂಢ ಮಿರೆ ನ್ಯಾಶನಲ್ ಫ್ರಂಟ್ (ಎಮ್‌ಎನ್‌ಎಫ್), ರೆರಮ್ ಪೀಪಲ್ಸ್ ಮೂವ್‌ಮೆಂಟ್ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಪಕ್ಷಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.

ಮತ ಎಣಿಕೆಯ ದಿನಾಂಕವನ್ನು ಬದಲಾಯಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿರುವ ಪ್ರಮುಖ ಚರ್ಚ್‌ಗಳ ಒಕ್ಕೂಟ ಮಿಜೋರಾಂ ಕೊಹ್ರಾನ್ ಹ್ರುಯಟ್ಯೂಟ್ ಕಮಿಟಿ (ಎಮ್‌ಕೆಎಚ್‌ಸಿ)ಯೂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಚುನಾವಣಾ ಆಯೋಗವು ಸೋಮವಾರ ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢ- ಈ 5 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿತ್ತು. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲಾ ರಾಜ್ಯಗಳ ಚುನಾವಣೆಯ ಮತ ಎಣಿಕೆಯು ಡಿಸೆಂಬರ್ 3 ರಂದು ನಡೆಯಲಿರುವುದು ಎಂದು ಅದು ಪ್ರಕಟಿಸಿತ್ತು.

‘‘ಕ್ರೈಸ್ತರಿಗೆ ರವಿವಾರಗಳು ಪವಿತ್ರವಾಗಿವೆ ಹಾಗೂ ಆ ದಿನ ಎಲ್ಲಾ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಪ್ರಾರ್ಥನೆಗಳು ನಡೆಯುತ್ತವೆ’’ ಎಂದು ಎಮ್‌ಕೆಎಚ್‌ಸಿ ತನ್ನ ಪತ್ರದಲ್ಲಿ ಮುಖ್ಯ ಚುನಾವಣಾ ಕಮಿಷನರ್ ರಾಜೀವ್ ಕುಮಾರ್‌ರನ್ನು ಒತ್ತಾಯಿಸಿದೆ.

2011ರ ಜನಗಣತಿಯಂತೆ, ಮಿಜೋರಾಂ ರಾಜ್ಯದಲ್ಲಿ ಕ್ರೈಸ್ತರ ಪ್ರಮಾಣ 87 ಶೇ. ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News