ಮುಖ್ತಾರ್ ಅನ್ಸಾರಿಗೆ ವಿಷ ಆಹಾರ ನೀಡಲಾಗಿತ್ತು | ಸುಪ್ರೀಂ ಕೋರ್ಟ್‌ನಲ್ಲಿ ಉಮರ್ ಅನ್ಸಾರಿ ಪ್ರತಿಪಾದನೆ
ಹೊಸದಿಲ್ಲಿ : ತನ್ನ ತಂದೆಗೆ ನೀಡಲಾಗಿದ್ದ ಆಹಾರದಲ್ಲಿ ವಿಷ ಬೆರೆಸಲಾಗಿತ್ತು ಹಾಗೂ ಅವರಿಗೆ ಅಗತ್ಯ ಇರುವ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಲಾಗಿತ್ತು. ಇದರಿಂದ ಅವರು ಕಸ್ಟಡಿಯಲ್ಲಿ ಸಾವನ್ನಪ್ಪಿದರು ಎಂದು ರಾಜಕಾರಣಿಯಾಗಿ ಬದಲಾದ ಭೂಗತ ಪಾತಕಿ ದಿವಂಗತ ಮುಖ್ತಾರ್ ಅನ್ಸಾರಿ ಅವರ ಪುತ್ರ ಸುಪ್ರೀಂ ಕೋರ್ಟ್ ಮುಂದೆ ಸೋಮವಾರ ಹೇಳಿದ್ದಾರೆ.
ಮೌ ಸದಾರ್ ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಅವರು ಮಾರ್ಚ್ 28ರಂದು ಉತ್ತರಪ್ರದೇಶದ ಬಾಂಡಾದಲ್ಲಿರುವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ಮುಖ್ತರ್ ಅನ್ಸಾರಿ ಅವರನ್ನು ಇರಿಸಲಾಗಿದ್ದ ಬಾಂಡಾ ಕಾರಾಗೃಹದ ಒಳಗೆ ತನ್ನ ತಂದೆ ಸುರಕ್ಷೆಯ ಕುರಿತು ಪ್ರಶ್ನಿಸಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ 2023ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಹರಿಕೃಷ್ಣ ರಾಯ್ ಹಾಗೂ ಎಸ್.ವಿ.ಎನ್. ಭಟ್ಟಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.
‘‘ಏನಾಗುತ್ತದೆ ಎಂದು ಭಯ ಪಟ್ಟಿದ್ದೇವೊ, ಅದೇ ಆಗಿದೆ ಎಂದಷ್ಟೇ ನಾವು ಹೇಳಬಹುದು’’ ಎಂದು ಉಮರ್ ಅನ್ಸಾರಿ ಅವರ ಪರವಾಗಿ ಹಾಜರಾಗಿದ್ದ ಕಪಿಲ್ ಸಿಬಲ್ ಪೀಠಕ್ಕೆ ತಿಳಿಸಿದರು.
‘‘ನಮಗೆ ಅವರನ್ನು ಹಿಂದೆ ತರಲು ಸಾಧ್ಯವಿಲ್ಲ. ಇದು ನಿಮಗೆ ಚೆನ್ನಾಗಿ ಗೊತ್ತು’’ ಎಂದು ಪೀಠ ಅಭಿಪ್ರಾಯಿಸಿತು.
ಈ ಪ್ರಕರಣದ ಕುರಿತಂತೆ ಕೆಲವು ತನಿಖೆಯನ್ನು ನಡೆಸಲಾಯಿತು ಎಂದು ಪ್ರತಿಪಾದಿಸಿದ ಸಿಬಲ್, ಈ ದೇಶದಲ್ಲಿ ಮಾನವರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದರು.
ಈ ಅರ್ಜಿಯ ಕುರಿತಂತೆ ನೋಟಿಸು ಜಾರಿಗೊಳಿಸಿದ ಪೀಠ, ಇದಕ್ಕೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಉತ್ತರಪ್ರದೇಶ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚಿಸಿತು.