ನಾಡಗೀತೆ ವಿವಾದ: ತಮಿಳುನಾಡು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಸ್ಟಾಲಿನ್ ಆಗ್ರಹ

Update: 2024-10-18 14:34 GMT

ಎಂ.ಕೆ.ಸ್ಟಾಲಿನ್ | PC : PTI 

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಾಡಲಾದ ತಮಿಳು ನಾಡಗೀತೆಯ ಸಂದರ್ಭದಲ್ಲಿ, ಆ ಗೀತೆಯಲ್ಲಿನ ‘ದ್ರಾವಿಡ’ ಪದವನ್ನು ಕೈಬಿಟ್ಟಿರುವ ಸಂಗತಿ ತಮಿಳುನಾಡು ಸರಕಾರ ಮತ್ತು ರಾಜ್ಯಪಾಲರ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ ಅವರನ್ನು ವಾಪಸ್‌ ಕರೆಸಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ. ರಾಜ್ಯಪಾಲ ಆರ್.ಎನ್.ರವಿ ದೇಶದ ಐಕ್ಯತೆಯನ್ನು ಅವಮಾನಿಸುತ್ತಿದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್.ರವಿ ಭಾಗವಹಿಸಿದ್ದಾಗ ಹಾಡಲಾದ ತಮಿಳು ರಾಜ್ಯ ಗೀತೆಯಲ್ಲಿ ಒಂದು ಸಾಲನ್ನು ಕೈಬಿಟ್ಟಿದ್ದರಿಂದ ತಮಿಳುನಾಡು ಸರಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ಸಂಘರ್ಷ ಮತ್ತೊಮ್ಮೆ ಭುಗಿಲೆದ್ದಿದೆ. ಇದೇ ಸಂದರ್ಭದಲ್ಲಿ ಹಿಂದಿ ಮಾಸಾಚರಣೆಯ ಸಮಾರೋಪ ಸಮಾರಂಭವನ್ನೂ ಆಯೋಜಿಸಿದ್ದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಆಕ್ಷೇಪಿಸಿರುವ ಅವರು, ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ದಿವಸವನ್ನು ಆಚರಿಸುವುದು ಇತರ ಭಾಷೆಗಳನ್ನು ತುಚ್ಛೀಕರಿಸಿದಂತೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯಪಾಲ ಎನ್.ಆರ್.ರವಿ ಭಾಗವಹಿಸಿದ್ದ ಸರಕಾರಿ ಕಾರ್ಯಕ್ರಮದ ಆರಂಭದಲ್ಲಿ ತಮಿಳು ರಾಜ್ಯ ಗೀತೆಯಾದ ತಮಿಳ್ ತಾಯಿ ವಾಸ್ತುವನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಭಾರತೀಯರನ್ನು ಉಲ್ಲೇಖಿಸುವ ದ್ರಾವಿಡ ಪದವನ್ನು ದೂರದರ್ಶನದ ಗಾಯಕ ಗುಂಪೊಂದು ಹಾಡುವಾಗ ಕೈಬಿಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News