ಸೂಕ್ತ ಸಮಯದಲ್ಲಿ ಬಂಧಿಸದ ತನಿಖಾ ಸಂಸ್ಥೆಗಳ ವೈಫಲ್ಯ‌ವು ವಿಜಯ್ ಮಲ್ಯ,‌ ನೀರವ್ ಮೋದಿ, ಚೋಕ್ಸಿ ಪರಾರಿಗೆ ಕಾರಣ: ಮುಂಬೈ ಕೋರ್ಟ್

Update: 2024-06-03 11:04 GMT

ವಿಜಯ್ ಮಲ್ಯ / ನೀರವ್ ಮೋದಿ (PTI)

ಮುಂಬೈ: ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿಯಂತಹ ಆರ್ಥಿಕ ಅಪರಾಧಗಳಲ್ಲಿ ಅಪೇಕ್ಷಿತ ವ್ಯಕ್ತಿಗಳನ್ನು ಸೂಕ್ತ ಸಮಯದಲ್ಲಿ ಬಂಧಿಸುವಲ್ಲಿ ತನಿಖಾ ಸಂಸ್ಥೆಗಳ ವೈಫಲ್ಯದಿಂದಾಗಿ ಅವರು ದೇಶದಿಂದ ಪರಾರಿಯಾಗಲು ಸಾಧ್ಯವಾಗಿದೆ ಎಂದು ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ(ಪಿಎಂಎಲ್‌ಎ) ಯಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಇಲ್ಲಿಯ ವಿಶೇಷ ನ್ಯಾಯಾಲಯವು ಹೇಳಿದೆ.

ಆರೋಪಿ ವ್ಯೋಮೇಶ ಶಾ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಜಾರಿ ನಿರ್ದೇಶನಾಲಯ (ಈ.ಡಿ)ದ ಆಕ್ಷೇಪದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

‘ಇಂತಹ ಅರ್ಜಿಯನ್ನು ಪುರಸ್ಕರಿಸಿದರೆ ಮೋದಿ, ಮಲ್ಯ ಮತ್ತು ಚೋಕ್ಸಿ ಪ್ರಕರಣಗಳಂತಹ ಸ್ಥಿತಿಯು ಉದ್ಭವಿಸುತ್ತದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಸುನಿಲ ಗೊನ್ಸಾಲ್ವಿಸ್ ಅವರು ಪ್ರಬಲವಾಗಿ ವಾದಿಸಿದ್ದಾರೆ. ಈ ವಾದವನ್ನು ನಾನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇನೆ ಮತ್ತು ಈ ವ್ಯಕ್ತಿಗಳನ್ನು ಸಕಾಲದಲ್ಲಿ ಬಂಧಿಸುವಲ್ಲಿ ಸಂಬಂಧಿಸಿದ ತನಿಖಾ ಸಂಸ್ಥೆಗಳ ವೈಫಲ್ಯದಿಂದಾಗಿ ಅವರು ಪರಾರಿಯಾಗಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ’ ಎಂದು ನ್ಯಾ.ದೇಶಪಾಂಡೆ ಕುಟುಕಿದರು.

ಸದ್ರಿ ಪ್ರಕರಣದಲ್ಲಿ ಆರೋಪಿ ಶಾ ಅವರನ್ನು ಬಂಧಿಸುವಲ್ಲಿ ವೈಫಲ್ಯಕ್ಕಾಗಿ ಮತ್ತು ಆರೋಪಿ ವಿದೇಶಕ್ಕೆ ತೆರಳುವುದನ್ನು ನ್ಯಾಯಾಲಯವು ತಡೆಯಬೇಕೆಂದು ನಿರೀಕ್ಷಿಸಿದ್ದಕ್ಕಾಗಿ ನ್ಯಾ.ದೇಶಪಾಂಡೆ ಈ.ಡಿ.ಯನ್ನು ತರಾಟೆಗೆತ್ತಿಕೊಂಡರು.

ಈ.ಡಿ.ಯಾವ ಕೆಲಸವನ್ನು ಮಾಡಲು ಮೂಲಭೂತವಾಗಿ ವಿಫಲಗೊಂಡಿದೆಯೋ ಅದನ್ನು ನ್ಯಾಯಾಲಯವು ಮಾಡಲು ಸಾಧ್ಯವಿಲ್ಲ ಎಂದು ನ್ಯಾ.ದೇಶಪಾಂಡೆ ಹೇಳಿದರು.

ಆರೋಪಿ ವಿದೇಶಕ್ಕೆ ಪಯಣಿಸುವ,ಸಾಕ್ಷ್ಯನಾಶ ಪಡಿಸುವ ಮತ್ತು ಅಡ್ಡಿಯನ್ನುಂಟು ಮಾಡುವ, ಪಲಾಯನ ಮಾಡುವ, ದೂರುದಾರರೊಂದಿಗೆ ರಾಜಿಯಾಗುವ ಯಾವುದೇ ಆತಂಕವಿಲ್ಲದೆ ಈ.ಡಿ. ಅವರನ್ನು ಮುಕ್ತವಾಗಿ ಬಿಟ್ಟಿರುತ್ತದೆ. ಆದರೆ ಅಂತಹ ವ್ಯಕ್ತಿ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದಾಗ ಇಂತಹ ಎಲ್ಲ ವಿವಾದಗಳು ಮತ್ತು ಆಕ್ಷೇಪಗಳು ತಲೆ ಎತ್ತುತ್ತವೆ. ಹೀಗಾಗಿ ಯಾವುದನ್ನು ಮಾಡಲು ಈ.ಡಿ.ಮೂಲಭೂತವಾಗಿ ವಿಫಲಗೊಂಡಿದೆಯೋ ಅದ್ನು ತಾನು ಮಾಡಲು ಸಾಧ್ಯವಿಲ್ಲ ಎಂಬ ದೃಢವಾದ ನಿಲುವನ್ನು ತಾನು ಪದೇ ಪದೇ ವ್ಯಕ್ತಪಡಿಸಿದ್ದೇನೆ ಎಂದು ನ್ಯಾಯಾಲಯವು ಹೇಳಿತು.

ಅರ್ಜಿದಾರ ಶಾಗೆ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಮತ್ತು ತನಿಖೆ ಮುಗಿಯುವವರೆಗೂ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದ ನ್ಯಾಯಾಲಯವು,ಪಿಎಂಎಲ್‌ಎ ಕಲಂ ೧೯ರಡಿ ಈ.ಡಿ.ಯಿಂದ ಬಂಧಿಸಲ್ಪಡದ ಮತ್ತು ಬದಲಿಗೆ ಸಮನ್ಸ್ ಗೌರವಿಸಿ ತನ್ನ ಮುಂದೆ ಹಾಜರಾಗುವ ವ್ಯಕ್ತಿಗಳ ಮೇಲೆ ತಾನು ಷರತ್ತುಗಳನ್ನು ಹೇರುವಂತಿಲ್ಲ ಎಂದೂ ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News