ಇಂಡಿಯಾ ಮೈತ್ರಿಕೂಟಕ್ಕೆ ಬಿಹಾರದ ʼಪಲ್ಟು ಕುಮಾರ್ʼ ಕಂಟಕ

Update: 2024-01-26 14:11 GMT

ನಿತೀಶ್ ಕುಮಾರ್ | Photo: PTI 

ಪಾಟ್ನಾ : ಬಿಜೆಪಿ ಬೆಂಬಲದೊಂದಿಗೆ ನಿತೀಶ್ ಕುಮಾರ್ ಅವರು ರವಿವಾರದಂದು ಬಿಹಾರದ ಮುಖ್ಯಮಂತ್ರಿಯಾಗಿ ಏಳನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ndtv ವರದಿ ಮಾಡಿದೆ.  ತನ್ನ ಹಳೇ ಸ್ನೇಹಿತ ಪಕ್ಷದ ಮೈತ್ರಿಕೂಟಕ್ಕೆ ನಿತೀಶ್ ಮತ್ತೊಮ್ಮೆ ಸೇರುವ ಮೂಲಕ ರಾಜಕೀಯದ ಚದುರಂಗದಾಟಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಬಿಜೆಪಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿದು ಬಂದಿದೆ.

ನಿತೀಶ್ ಕುಮಾರ್ ರ ನೂತನ ಮೈತ್ರಿ ಹೆಜ್ಜೆಯಿಂದ ವಿಧಾನಸಭೆಯನ್ನು ವಿಸರ್ಜಿಸುವ ಪ್ರಮೇಯ ಬರುವುದಿಲ್ಲ. ಹೊಸದಾಗಿ ಮತದಾನವೂ ನಡೆಯುವುದಿಲ್ಲ, ಎರಡೂ ಪಕ್ಷಗಳಿಗೂ ವಿಧಾನಸಭೆ ಚುನಾವಣೆಯ ಅವಸರ ಇಲ್ಲ ಎಂದು ಮೂಲಗಳು ತಿಳಿಸಿವೆ. ನಿತೀಶ್ ಅವರ ಜೆಡಿಯು ಮತ್ತು ಬಿಜೆಪಿ ಪಕ್ಷದ ಸಧ್ಯದ ಗುರಿ ಮುಂದಿನ ಲೋಕಸಭಾ ಚುನಾವಣೆಯಾಗಿರುವುದರಿಂದ ಆ ನಿಟ್ಟಿನಲ್ಲಿ ರಾಜಕೀಯ ಬಲವರ್ಧನೆಗೆ ಪಕ್ಷಗಳು ಗಮನಹರಿಸಲಿವೆ ಎನ್ನಲಾಗಿದೆ.

ಈ ಮಧ್ಯೆ RJD ಯ ಮನೋಜ್ ಝಾ ಅವರು ನಿತೀಶ್ ಕುಮಾರ್ ಅವರ ನಿಲುವನ್ನು ಈ ದಿನದ ಅಂತ್ಯದೊಳಗೆ ಸ್ಪಷ್ಟಪಡಿಸುವಂತೆ ಹೇಳಿದ್ದಾರೆ. ಅದರೊಂದಿಗೆ ನಿತೀಶ್  ಅವರು ಇಂಡಿಯಾ ಮೈತ್ರಿಕೂಟದೊಂದಿಗೆ ಉಳಿಯುತ್ತಾರೆಯೇ ಅಥವಾ ಹೊರ ಹೋಗುತ್ತಾರೆ ಎಂಬ ಚಿತ್ರಣ ಸಿಗಲಿದೆ ಎನ್ನಲಾಗಿದೆ.

ಜೆಡಿಯು ಮುಖ್ಯಸ್ಥರೂ ಆಗಿರುವ ನಿತೀಶ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವುದು ಸೇರಿದಂತೆ ಜನವರಿ 28 ರಂದು ನಿಗದಿಗೊಳಿಸಿದ್ದ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯಿಂದ ಆರ್‌ ಜೆ ಡಿ ಗೆ ತಮ್ಮ ರಾಜಕೀಯ ಜಿಗಿತವನ್ನು ಹಿಮ್ಮೆಟ್ಟಿಸುವ ಮೂಲಕ ತಮ್ಮ 'ಪಲ್ಟು ಕುಮಾರ್' ಅಡ್ಡಹೆಸರನ್ನು ಮರುಪಡೆಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟಕ್ಕೆ ಮರಳುತ್ತಿರುವುದು ಸಾಕಷ್ಟು ಯೋಜನೆಗಳಿಂದಲೇ ನಡೆಯುತ್ತಿರುವಂತೆ ಕಂಡು ಬರುತ್ತಿದೆ. ನಿತೀಶ್ ಅವರ ಘರ್ ವಾಪಸಿಯ ಷರತ್ತುಗಳು ಜೆಡಿಯುಗೆ ನೀಡಲಾದ ಲೋಕಸಭಾ ಸ್ಥಾನಗಳ ಕಡಿತವನ್ನು ಒಳಗೊಂಡಿವೆ ಎಂದು ಹೇಳಲಾಗುತ್ತದೆ. 2019 ರಲ್ಲಿ ಪಕ್ಷವು 17 ರಲ್ಲಿ ಸ್ಪರ್ಧಿಸಿ 16 ಸ್ಥಾನಗಳನ್ನು ಗೆದ್ದಿದ್ದ ಜೆಡಿಯು ಗೆ ನೂತನ ಮೈತ್ರಿಕೂಟದಲ್ಲಿ 12-15 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ. 

ನಿತೀಶ್ ಅವರ ಬಿಜೆಪಿಯ ಜೊತೆಗಿನ ಮೈತ್ರಿಯ ಬಗ್ಗೆ ಇನ್ನೂ ದೃಢೀಕರಿಸದಿದ್ದರೂ, ಅವರ  ನಿಕಟ ಸಹಾಯಕ ಸುಶೀಲ್ ಕುಮಾರ್ ಮೋದಿಯವರು "ರಾಜಕೀಯದಲ್ಲಿ, ಬಾಗಿಲುಗಳು ಶಾಶ್ವತವಾಗಿ ಮುಚ್ಚಿಲ್ಲ. ರಾಜಕೀಯವು ಸಾಧ್ಯತೆಗಳ ಆಟವಾಗಿದೆ, ಏನು ಬೇಕಾದರೂ ಆಗಬಹುದು" ಎಂದು ಹೇಳಿರುವುದು ಹೊಸ ರಾಜಕೀಯ ಆಯಾಮವನ್ನು ತೆರೆದಿಟ್ಟಿದೆ. 

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಇಂಡಿಯಾ ಬಣ ಇನ್ನೂ ಭರವಸೆಯನ್ನು ಕಳೆದುಕೊಂಡಿಲ್ಲ. ಬಿಹಾರದ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಅವರು ಎಎನ್‌ಐ ಸುದ್ದಿ ಸಂಸ್ಥೆಯ ಜೊತೆ ಮಾತನಾಡುತಾ, "ನಿತೀಶ್ ಕುಮಾರ್ ಅವರು ಮೈತ್ರಿಯೊಂದಿಗೆ ಉಳಿಯುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಅವರು ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಹೊರಹಾಕಲು ನಿರ್ಧರಿಸಿದ್ದಾರೆ ಎಂದು ನಾವು ಅವರನ್ನು ನಂಬುತ್ತೇವೆ" ಎಂದು ಹೇಳಿದರು.

ಗುರುವಾರ ನಿತೀಶ್ ಅವರ ನಡೆ ಇಷ್ಟೆಲ್ಲಾ ರಾಜಕೀಯ ಚರ್ಚೆಗಳಿಗೆ ಕಾಣರವಾಯಿತು. ಮೊದಲು ಅವರು ರಾಹುಲ್ ಗಾಂಧಿಯವರ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯಲ್ಲಿ ಭಾಗವಹಿಸಲು ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದರು. ನಂತರ ಬಿಜೆಪಿಯ ತಲುಪುವ ಮೂಲಕ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ತುದಿಗಾಲಲ್ಲಿ  ನಿಲ್ಲಿಸಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News