ಪೊಟ್ಟಣದಲ್ಲಿ ಒಂದು ಬಿಸ್ಕತ್ ಕಡಿಮೆ: ಗ್ರಾಹಕನಿಗೆ ರೂ. ಒಂದು ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ ತಮಿಳುನಾಡು ಗ್ರಾಹಕರ ವೇದಿಕೆ!

Update: 2023-09-06 18:30 GMT

ಸಾಂದರ್ಭಿಕ ಚಿತ್ರ.


ತಿರುವಳ್ಳೂರ್ (ತಮಿಳುನಾಡು): ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕತ್ ಪೊಟ್ಟಣದ ಮೇಲೆ ನಮೂದಿಸಿರುವುದಕ್ಕಿಂತ ಒಂದು ಬಿಸ್ಕತ್ ಅನ್ನು ಕಡಿಮೆ ಪ್ಯಾಕ್ ಮಾಡುವ ಮೂಲಕ ನ್ಯಾಯಯುತವಲ್ಲದ ವ್ಯಾಪಾರ ಧೋರಣೆಯನ್ನು ಪ್ರದರ್ಶಿಸಲಾಗಿದೆ ಎಂದು ಐಟಿಸಿ ಫುಡ್ಸ್ ಲಿ. ವಿಭಾಗದ ವಿರುದ್ಧ ದೂರು ನೀಡಿದ್ದ ಗ್ರಾಹಕನಿಗೆ ರೂ. ಒಂದು ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವೇದಿಕೆಯು ನಿರ್ದೇಶನ ನೀಡಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

“ನಿರ್ದಿಷ್ಟ ದೃಢೀಕರಣದೊಂದಿಗೆ ವಿವಾದಿತ ಬ್ಯಾಚ್ ಸಂಖ್ಯೆ 0502C36ಯ ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕತ್ತಿನ ಮಾರಾಟವನ್ನು ಹಿಂಪಡೆಯಬೇಕು” ಎಂದೂ ಐಟಿಸಿ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯು ಸೂಚಿಸಿದೆ.

ಬಿಸ್ಕತ್ತಿನ ತೂಕಕ್ಕೆ ಸಂಬಂಧಿಸಿದ ತಕರಾರು ಅನ್ವಯವಾಗುವುದಿಲ್ಲ ಎಂಬ ಕಂಪನಿಯ ವಾದವನ್ನು ಗ್ರಾಹಕರ ವೇದಿಕೆಯು ತಳ್ಳಿ ಹಾಕಿದೆ. ಜಾಹೀರಾತಿನಲ್ಲಿರುವಂತೆ ಪೊಟ್ಟಣದಲ್ಲಿ 16 ಬಿಸ್ಕತ್ತುಗಳಿರುವ ಬದಲು 15 ಬಿಸ್ಕತ್ತುಗಳಿದ್ದವು ಎಂದು ಚೆನ್ನೈ ಮೂಲದ ದೂರುದಾರ ಪಿ.ದಿಲ್ಲಿಬಾಬು ಆರೋಪಿಸಿದ್ದರು.

“ಬಿಸ್ಕತ್ತು ಉತ್ಪನ್ನವನ್ನು ತೂಕದ ಆಧಾರದಲ್ಲಿ ಮಾರಾಟ ಮಾಡಲಾಗುತ್ತದೆಯೇ ಹೊರತು ಬಿಸ್ಕತ್ತಿನ ಸಂಖ್ಯೆಯನ್ನು ಆಧರಿಸಿಯಲ್ಲ ಎಂದು ಪ್ರಥಮ ಪ್ರತಿವಾದಿ (ಕಂಪನಿ) ಪರವಾದ ವಕೀಲರು ವಾದ ಮಂಡಿಸಿದ್ದಾರೆ. ಆದರೆ, ಉತ್ಪನ್ನವನ್ನು ಬಿಸ್ಕತ್ ಸಂಖ್ಯೆಯನ್ನು ಆಧರಿಸಿ ಖರೀದಿಸಬೇಕು ಎಂದು ಬಿಸ್ಕತ್ ಪೊಟ್ಟಣದ ಮೇಲೆ ಖರೀದಿದಾರರು/ಗ್ರಾಹಕರಿಗೆ ಸ್ಪಷ್ಟವಾಗಿ ಮಾಹಿತಿ ನೀಡಲಾಗಿರುವುದರಿಂದ ಇಂತಹ ವಾದಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ.

 ಪೊಟ್ಟಣದ ಮೇಲೆ ಲಭ್ಯವಿರುವ ಮಾಹಿತಿಗಳು ಖರೀದಿದಾರರ ವರ್ತನೆಯ ಮೇಲೆ ಪರಿಣಾಮ ಬೀರಿ, ಉತ್ಪನ್ನವನ್ನು ಖರೀದಿಸುವ ಕುರಿತು ನಿರ್ಣಯಿಸುವಂತೆ ಮಾಡುವುದರಿಂದ ಹಾಗೂ ಗ್ರಾಹಕರ ಸಂತೃಪ್ತಿಯಲ್ಲಿ ಪೊಟ್ಟಣ ಅಥವಾ ಚೀಟಿಯ ಮೇಲಿರುವ ಮಾಹಿತಿಯು ಗಮನಾರ್ಹ ಪಾತ್ರ ವಹಿಸುವುದರಿಂದ ಯಾವುದೇ ಜಾಗೃತ ಗ್ರಾಹಕ ಪೊಟ್ಟಣವನ್ನು ನೋಡುವ ಮೂಲಕ ಖರೀದಿಯ ಕುರಿತು ನಿರ್ಧರಿಸುತ್ತಾನೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಹಾಲಿ ಪ್ರಕರಣದಲ್ಲಿ ಬಿಸ್ಕತ್ ಸಂಖ್ಯೆಯ ಕುರಿತು ಮಾತ್ರ ದೂರು ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News