ಲೋಕಸಭೆಯಲ್ಲಿ ವಿಪಕ್ಷಗಳ ಒಕ್ಕೂಟ INDIA ದಿಂದ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ
ಹೊಸದಿಲ್ಲಿ: ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದ ನಡುವೆಯೇ ವಿರೋಧ ಪಕ್ಷಗಳ ಒಕ್ಕೂಟ ‘INDIA’ ಲೋಕಸಭೆಯಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜುಲೈ 25 ರ ಮಂಗಳವಾರದಂದು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚೇಂಬರ್ ನಲ್ಲಿ ನಡೆದ ಮಿತ್ರಪಕ್ಷಗಳ ನಾಯಕರ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಖರ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಲೋಕಸಭೆಯಲ್ಲಿ ಮಣಿಪುರ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಯನ್ನು ಕೋರುವ ಪ್ರತಿಪಕ್ಷಗಳ ಬೇಡಿಕೆಗೆ ಸರಕಾರವು ಕಿವಿಗೊಡುವ ಸಾಧ್ಯತೆಯಿಲ್ಲದಿರುವುದರಿಂದ ಹಾಗೂ ಈಗ ಕೆಳಮನೆಯಲ್ಲಿ ಪ್ರತಿಭಟನೆಯ ನಡುವೆ ಮಸೂದೆಗಳನ್ನು ಅಂಗೀಕರಿಸಲು ಒತ್ತಾಯಿಸಬಹುದು ಎಂದು ಚರ್ಚೆಯ ಸಮಯದಲ್ಲಿ ಭಾವಿಸಲಾಗಿದೆ, ಸರಕಾರದ ಮೇಲೆ ಒತ್ತಡ ಹೇರಲು ಈ ಕ್ರಮದ ಅಗತ್ಯವಿದೆ ಎಂದು ತೀರ್ಮಾನಿಸಲಾಗಿದೆ.
ಜುಲೈ 20ರಿಂದ ಮುಂಗಾರು ಅಧಿವೇಶನ ಆರಂಭವಾದ ನಂತರ ಸಂಸತ್ತಿನ ಎರಡೂ ಸದನಗಳಲ್ಲಿ ವಿಪಕ್ಷಗಳು ಮಣಿಪುರದ ಪರಿಸ್ಥಿತಿಯ ಕುರಿತು ಪ್ರಧಾನಿ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸಿ ನಿರಂತರವಾಗಿ ಗದ್ದಲ ನಡೆಸುತ್ತಿದ್ದು ಕಲಾಪ ಮುಂದೂಡಲಾಗುತ್ತಿದೆ.