ದೇಶದಲ್ಲಿ 2019-2021ರ ನಡುವೆ 10 ಲಕ್ಷ ಮಹಿಳೆಯರು ನಾಪತ್ತೆ: NCRB ವರದಿ

2021ರ ಅವಧಿಯೊಂದರಲ್ಲೇ 18 ವರ್ಷ ಮೀರಿದ 3,75,058 ಮಹಿಳೆಯರು ಕಾಣೆಯಾಗಿದ್ದಾರೆ.

Update: 2023-07-27 14:46 GMT

ಹೊಸದಿಲ್ಲಿ: 2019-2021ರ ನಡುವೆ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಗರಿಷ್ಠ ಪ್ರಮಾಣದ ಯುವತಿಯರು ಹಾಗೂ ಮಹಿಳೆಯರು ಕಾಣೆಯಾಗಿದ್ದಾರೆ. ಭಾರತದಿಂದ ಕಾಣೆಯಾಗಿರುವ ಮಹಿಳೆಯರು ಹಾಗೂ ಯುವತಿಯರ ಸಂಖ್ಯೆಯ ಕುರಿತು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (NCRB) ನೂತನ ದತ್ತಾಂಶವನ್ನು ಬಿಡುಗಡೆ ಮಾಡಿದೆ. NCRB ದತ್ತಾಂಶವನ್ನು ಉಲ್ಲೇಖಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಾರ, 2021ರ ಅವಧಿಯೊಂದರಲ್ಲೇ 18 ವರ್ಷ ಮೀರಿದ 3,75,058 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ತಿಳಿಸಿದೆ ಎಂದು hindustantimes.com ವರದಿ ಮಾಡಿದೆ.

2019-2021ರ ನಡುವೆ ಗರಿಷ್ಠ ಪ್ರಮಾಣದಲ್ಲಿ ಕಾಣೆಯಾಗಿರುವ ಯುವತಿಯರು ಹಾಗೂ ಮಹಿಳೆಯರು ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳೆರಡಕ್ಕೇ ಸೇರಿದ್ದಾರೆ.

ಮಧ್ಯಪ್ರದೇಶದಿಂದ 2019ರಲ್ಲಿ 52,119, 2020ರಲ್ಲಿ 52,357 ಹಾಗೂ 2021ರಲ್ಲಿ 55,704 ಮಹಿಳೆಯರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದಿಂದ 2019ರಲ್ಲಿ 63,167, 2020ರಲ್ಲಿ 58,735 ಹಾಗೂ 2021ರಲ್ಲಿ 56,498 ಮಹಿಳೆಯರು ನಾಪತ್ತೆಯಾಗಿದ್ದಾರೆ.

2021ರ ಅವಧಿಯಲ್ಲಿ ದೇಶಾದ್ಯಂತ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 90,113 ಬಾಲಕಿಯರು ಕಾಣೆಯಾಗಿದ್ದು, ಈ ಪೈಕಿ ಪಶ್ಚಿಮ ಬಂಗಾಳದಿಂದ ಅತ್ಯಧಿಕ (13,278) ಬಾಲಕಿಯರು ಕಾಣೆಯಾಗಿದ್ದಾರೆ.

ಒಟ್ಟಾರೆಯಾಗಿ, 2019-2021ರ ನಡುವೆ ದೇಶಾದ್ಯಂತ ಒಟ್ಟು 10,61,648 ಮಹಿಳೆಯರು ಕಾಣೆಯಾಗಿದ್ದಾರೆ. ಇದೇ ಅವಧಿಯಲ್ಲಿ 2,51,430 ಬಾಲಕಿಯರು ನಾಪತ್ತೆಯಾಗಿದ್ದಾರೆ.Over 10 lakh women went missing across the country

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೃಹ ಸಚಿವಾಲಯವು, "ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತು ತನಿಖೆ ನಡೆಸುವುದು ಹಾಗೂ ಶಿಕ್ಷೆ ಕೊಡಿಸುವುದೂ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆ ಮಾಡುವುದು ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಕೆಯಾಗಿದೆ" ಎಂದು ಹೇಳಿದೆ.

ಲೈಂಗಿಕ ಅಪರಾಧಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ, 2013ರ ಜಾರಿಯೂ ಸೇರಿದಂತೆ ಮಹಿಳಾ ಸುರಕ್ಷತೆಗಾಗಿ ತೆಗೆದುಕೊಂಡಿರುವ ಹಲವಾರು ಉಪಕ್ರಮಗಳ ಕುರಿತೂ ಅದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News