ಲೋಕಸಭೆಯಲ್ಲಿ ಮುಂದುವರಿದ ಗದ್ದಲ: ಘೋಷಣೆ ಕೂಗುತ್ತಿದ್ದ ವಿಪಕ್ಷದ ಸಂಸದನಿಗೆ ನೀರು ನೀಡಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಲೋಕಸಭೆ ಇಂದೂ ಗದ್ದಲದ ಗೂಡಾಗಿ ಮುಂದುವರಿದಿದ್ದು, ಬಾವಿಗಿಳಿದ ವಿರೋಧ ಪಕ್ಷದ ಸಂಸದರು ಪ್ರಧಾನಿ ಮೋದಿ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಕೂಗಿದರು. ಈ ನಡುವೆ ಅಚ್ಚರಿಯ ನಡೆಯೊಂದನ್ನು ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ವಿರೋಧ ಪಕ್ಷಗಳ ಸಂಸದರಿಗೆ ಕುಡಿಯುವ ನೀರು ನೀಡಿರುವ ವಿಡಿಯೋ ವೈರಲ್ ಆಗಿದೆ.
ಮೊದಳಿಗೆ ಆಡಳಿತ ಪಕ್ದ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರಿಗೆ ಮೋದಿ ನೀರಿನ ಲೋಟವನ್ನು ನೀಡಿದರು ಆದರೆ ಅವರು ನಿರಾಕರಿಸಿದರು. ನಂತರ ಪ್ರಧಾನಿ ವಿಪಕ್ಷದ ಮತ್ತೊಬ್ಬ ಸಂಸದ ಹಿಬಿ ಈಡನ್ ಅವರಿಗೆ ಒಂದು ಲೋಟ ನೀರು ನೀಡಿದರು. ಈ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿರೋಧ ಪಕ್ಷಗಳ ಸಂಸದರ ಘೋಷಣೆಗಳ ನಡುವೆ ಪ್ರಧಾನಿ ಮೋದಿ ಸದನವನ್ನುದ್ದೇಶಿಸಿ ತಮ್ಮ ಭಾಷಣವನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಅವರು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಸಂಸತ್ತಿನಲ್ಲಿ ರಾಹುಲ್ ಗಾಂಧಿ ತೋರಿದ ವರ್ತನೆಯನ್ನು ಬಾಲಿಶ ಎಂದು ಅವರು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಈ ನಡೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ, "ತಮ್ಮ ಇಡೀ ಭಾಷಣಕ್ಕೆ ಅಡ್ಡಿಯುಂಟು ಮಾಡಿದ ವಿರೋಧ ಪಕ್ಷಗಳ ಸಂಸದರಿಗೆ ಸರ್ವಾಧಿಕಾರಿ ಮೋದಿ ಕುಡಿಯಲು ನೀರು ನೀಡಿದರು" ಎಂದು ವ್ಯಂಗ್ಯವಾಡಿದ್ದಾರೆ.