“ಪ್ರಧಾನಿ ಮೋದಿಯವರು ನನ್ನನ್ನು ಕ್ಷಮಿಸುವುದಿಲ್ಲ ಎಂದಿದ್ದರು” : ಭೋಪಾಲ್ ಟಿಕೆಟ್ ನಿರಾಕರಣೆಯ ನಂತರ ಪ್ರಜ್ಞಾ ಠಾಕೂರ್ ಹೇಳಿಕೆ
Update: 2024-03-03 16:37 GMT
ಹೊಸದಿಲ್ಲಿ: ಪ್ರಧಾನಿ ಮೋದಿ ನನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದರು ಎಂದು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ವಂಚಿತ ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
ಈ ಕುರಿತು India Today TVಗೆ ಪ್ರತಿಕ್ರಿಯಿಸಿರುವ ಪ್ರಜ್ಞಾ ಠಾಕೂರ್, "ನಾನು ಈ ಹಿಂದೆಯೂ ಟಿಕೆಟ್ ಬಯಸಿರಲಿಲ್ಲ ಹಾಗೂ ಮುಂದೆಯೂ ಟಿಕೆಟ್ ಬಯಸುವುದಿಲ್ಲ. ನನ್ನ ಈ ಹಿಂದಿನ ಕೆಲವು ಹೇಳಿಕೆಗಳಲ್ಲಿನ ಪದಗಳು ಪ್ರಧಾನಿ ನರೇಂದ್ರ ಮೋದಿಗೆ ಇಷ್ಟವಾಗಿರಲಿಕ್ಕಿಲ್ಲ. ನನ್ನನ್ನು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರೂ ಕೂಡಾ. ಹೀಗಿದ್ದೂ, ನಾನು ಈ ಹಿಂದೆಯೆ ನನ್ನ ಹೇಳಿಕೆಗಳಿಗೆ ಕ್ಷಮೆ ಯಾಚಿಸಿದ್ದೇನೆ" ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗಾಗಿ ಶನಿವಾರ ಬಿಜೆಪಿ ಬಿಡುಗಡೆ ಮಾಡಿರುವ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿರುವ ಹಾಲಿ 33 ಸಂಸದರ ಪೈಕಿ ಪ್ರಜ್ಞಾ ಠಾಕೂರ್ ಕೂಡಾ ಸೇರಿದ್ದಾರೆ.