ಸಂಸತ್ತಿನಲ್ಲಿ ರಾಹುಲ್ ಗಾಂಧಿ ನೀಟ್ ವಿಚಾರ ಪ್ರಸ್ತಾಪಿಸಿದಾಗ ಮೈಕ್ ಆಫ್ ಮಾಡಲಾಗಿತ್ತು: ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ಲೋಸಭೆಯ ವಿಪಕ್ಷ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತಿರುವ ವೇಳೆ ಅವರ ಮೈಕ್ ಅನ್ನು ಆಫ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ಲೋಕಸಭೆಯಲ್ಲಿ ರಾಹುಲ್ ಅವರು ಸ್ಪೀಕರ್ ಓಂ ಬಿರ್ಲಾ ಬಳಿ ತಮ್ಮ ಮೈಕ್ರೋಫೋನ್ ಆನ್ ಮಾಡುವಂತೆ ವಿನಂತಿಸುತ್ತಿರುವ ವೀಡಿಯೋವನ್ನು ಕಾಂಗ್ರೆಸ್ ಪಕ್ಷ ಎಕ್ಸ್‌ನಲ್ಲಿ ಶೇರ್ ಮಾಡಿದೆ. ನೀಟ್ ವಿವಾದದ ಕುರಿತು ಚರ್ಚೆ ನಡೆಸಬೇಕು ಮತ್ತು ಸರ್ಕಾರ ಈ ಕುರಿತು ಹೇಳಿಕೆ ನೀಡಬೇಕೆಂದು ರಾಹುಲ್ ಆಗ್ರಹಿಸಿದ್ದರು.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸ್ಪೀಕರ್, ತಾನು ಸಂಸದರ ಮೈಕ್ರೋಫೋನ್‌ಗಳನ್ನು ಸ್ವಿಚ್ ಆಫ್ ಮಾಡುವುದಿಲ್ಲ, ತಮ್ಮ ಬಳಿ ಅಂತಹ ನಿಯಂತ್ರಣಗಳಿಲ್ಲ ಎಂದಿದ್ದಾರೆ.
“ರಾಷ್ಟ್ರಪತಿಗಳ ಭಾಷಣದ ಕುರಿತು ಚರ್ಚೆ ನಡೆಯಬೇಕು. ಇತರ ವಿಚಾರಗಳನ್ನು ಸದನದಲ್ಲಿ ದಾಖಲಿಸಿಕೊಳ್ಳಲಾಗುವುದಿಲ್ಲ,”ಎಂದು ಅವರು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ನೀಟ್ ವಿರುದ್ಧ ಚಕಾರವೆತ್ತುತ್ತಿಲ್ಲ. ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಯುವಜನತೆಗೆ ದನಿಯಾಗಿ ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ, ಮೈಕ್ ಆಫ್ ಮಾಡುವಂತಹ ಅಗ್ಗದ ತಂತ್ರಗಳ ಮೂಲಕ ದನಿಯನ್ನು ಹತ್ತಿಕ್ಕುವ ಯತ್ನ ಮಾಡಲಾಗುತ್ತಿದೆ,” ಎಂದು ವೀಡಿಯೋ ಜೊತೆಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇಂದು ಸದನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸಂಸದ ಕೆ ಸಿ ವೇಣುಗೋಪಾಲ್ ಅವರು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಿದರು. ಆದರೆ ಸ್ಪೀಕರ್ ಅವರು ಸದನವು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಸುವುದು ಎಂದು ಹೇಳಿದರು.
ಸದನದಲ್ಲಿ ಗದ್ದಲ ಉಂಟಾದಾಗ ಸದನವನ್ನು ಜುಲೈ 1ರ ತನಕ ಸ್ಪೀಕರ್ ಮುಂದೂಡಿದರು.
“ವಿಪಕ್ಷ ಅನಗತ್ಯ ಬೇಡಿಕೆ ಇಡುತ್ತಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ವೇಳೆ ನಿಲುವಳಿ ಸೂಚನೆಗೆ ಅವಕಾಶವಿಲ್ಲ. ಸರ್ಕಾರ ನೀಟ್ ವಿಚಾರ ಚರ್ಚಿಸಲು ಸಿದ್ಧವಿದೆ," ಎಂದು ಸರ್ಕಾರಿ ಮೂಲಗಳು ತಿಳಿಸಿವೆ.