ರಾಜಸ್ಥಾನ ವಿಧಾನಸಭಾ ಚುನಾವಣೆ; 199 ಕ್ಷೇತ್ರಗಳಲ್ಲಿ ಮತದಾನ ಆರಂಭ
ಜೈಪುರ: 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯ 199 ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ ಮತದಾನ ಆರಂಭವಾಗಿದೆ. ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಆಡಳಿತ ವಿರೋಧಿ ಅಲೆಯ ನಡುವೆಯೂ ಮತ್ತೊಂದು ಅವಧಿಗೆ ಅಧಿಕಾರದಲ್ಲಿ ಮುಂದುವರಿಯುವ ಕನಸನ್ನು ಆಡಳಿತಾರೂಢ ಕಾಂಗ್ರೆಸ್ ಕಾಣುತ್ತಿದ್ದು, ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಕಿತ್ತೊಗೆಯುವ ಪ್ರಯತ್ನದಲ್ಲಿದೆ.
ಶ್ರೀಗಂಗಾನಗರದ ಕಾರಣಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗುಮೀಟ್ ಸಿಂಗ್ ಕೂನರ್ ಸಾವಿನ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ಹೇಳಿದ್ದಾರೆ.
ರಾಜ್ಯದ 5,25,38,105 ಮಂದಿ ಅರ್ಹ ಮತದಾರರು 1862 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಈ ಪೈಕಿ 1.71 ಕೋಟಿ ಮಂದಿ 18-30 ವಯೋಮಿತಿಯತವರಾಗಿದ್ದು, 22.61 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತ್ಸರ, ಸ್ಪೀಕರ್ ಸಿ.ಪಿ.ಜೋಶಿ, ಸಂಪುಟದ ಹಿರಿಯ ಸಚಿವರಾದ ಶಾಂತಿ ಧಾರಿವಾಲ್, ಬಿ.ಡಿ.ಕಲ್ಲಾ, ಭನ್ವರ್ ಸಿಂಗ್ ಭಾತಿ, ಸಲೇಹ್ ಮೊಹ್ಮದ್, ಮಮತಾ ಭೂಪೇಶ್, ಪ್ರತಾಪ್ ಸಿಂಗ್ ಕಚಾರಿಯಾವಾಸ್, ರಾಜೇಂದ್ರ ಯಾದವ್, ಶಕುಂತಲಾ ರಾವತ್, ಉದಯ್ಲಾಲ್, ಮಾಜಿ ಡಿಸಿಎಂ ಸಚಿನ್ ಪೈಲಟ್ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
ಮಾಜಿ ಮುಖ್ಯ ಕಾರ್ಯದರ್ಶಿ ನಿರಂಜನ್ ಆರ್ಯ, ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಿಜೆಪಿಯಿಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಉಪ ನಾಯಕ ಸತೀಶ್ ಪೂನಿಯಾ, ಮಾಜಿ ಸಿಎಂ ವಸುಂಧರ ರಾಜೇ, ಸಂಸದರಾದ ದಿಯಾ ಕುಮಾರಿ, ರಾಜ್ಯವರ್ಧನ ರಾಥೋಡ್, ಬಾಬಾ ಬಾಲಕಾಂತ್ ಹಾಗೂ ಕಿರೋಡಿಲಾಲ್ ಮೀನಾ ಕಣದಲ್ಲಿರುವ ಪ್ರಮುಖರು.
ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಗಿರಿರಾಜ್ ಸಿಂಗ್ ಮಲಿಂಗಾ ಸೇರಿದಂತೆ 59 ಮಂದಿ ಶಾಸಕರಿಗೆ ಹಾಗೂ ಆರು ಮಂದಿ ಸಂಸದರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ 97 ಹಾಲಿ ಶಾಸಕರನ್ನು ಕಣಕ್ಕೆ ಇಳಿಸಿದೆ.