ರಾಜ್ಯಸಭಾ ಚುನಾವಣೆ: 'ಅಡ್ಡ ಮತದಾನ’ದ ಭೀತಿಯಲ್ಲಿ ಸಮಾಜವಾದಿ ಪಕ್ಷ

Update: 2024-02-27 03:08 GMT

Photo: PTI

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ಮಂಗಳವಾರ ನಡೆಯುವ ಮತದಾನದಲ್ಲಿ ಸಮಾಜವಾದಿ ಪಕ್ಷ- ಕಾಂಗ್ರೆಸ್ ಮೈತ್ರಿಕೂಟ 'ಅಡ್ಡ ಮತದಾನ' ಭೀತಿ ಎದುರಿಸುತ್ತಿದೆ.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ತಮ್ಮ ನಿವಾಸದಲ್ಲಿ ಮತದಾನದ ಹಿಂದಿನ ದಿನ ಕರೆದಿದ್ದ ಔತಣಕೂಟಕ್ಕೆ ಪಕ್ಷದ ಎಂಟು ಮಂದಿ ಶಾಸಕರು ಗೈರಾಗಿರುವುದು ಈ ವದಂತಿಗಳಿಗೆ ಕಾರಣವಾಗಿದೆ.

ಹತ್ತು ಸ್ಥಾನಗಳ ಪೈಕಿ ಬಿಜೆಪಿ ಮೊದಲು ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು ಹಾಗೂ ಸಮಾಜವಾದಿ ಪಕ್ಷ ಮೂರು ಸ್ಥಾನಗಳಿಗೆ ಸ್ಪರ್ಧಿಸಿತ್ತು. ಆದರೆ ಬಿಜೆಪಿ ಕೊನೆಕ್ಷಣದಲ್ಲಿ ಮಾಜಿ ಸಂಸದ ಸಂಜಯ್ ಸೇಥ್ ಅವರನ್ನು ಎಂಟನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಸಮಾಜವಾದಿ ಪಕ್ಷದಿಂದ ಅಖಿಲೇಶ್ ಔತಣಕೂಟಕ್ಕೆ ಗೈರುಹಾಜರಾದ ರಾಕೇಶ್ ಪಾಂಡೆ, ಅಭಯ್ ಸಿಂಗ್, ಮನೋಜ್ ಪಾಂಡೆ, ರಾಕೇಶ್ ಪ್ರತಾಪ್ ಸಿಂಗ್, ವಿನೋದ್ ಚತುರ್ವೇದಿ, ಮಹಾರಾಜ್ ಪ್ರಜಾಪತಿ, ಪೂಜಾ ಪಾಲ್ ಮತ್ತು ಪಲ್ಲವಿ ಪಟೇಲ್ ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ತಮ್ಮ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಹಾಗೂ ಎಸ್ಪಿ ಹರಸಾಹಸ ನಡೆಸಿದ್ದು, ಎರಡು ಶಾಸಕರನ್ನು ಹೊಂದಿರುವ ರಾಜ ಭಯ್ಯಾ ಅವರ ಜನಸತ್ತಾ-ಲೋಕತಾಂತ್ರಿಕ ಬಿಜೆಪಿಗೆ ಬೆಂಬಲ ಸೂಚಿಸಿದೆ. ಚೌಧರಿ ಚರಣ್ ಸಿಂಗ್ ಅವರಿಗೆ ಭಾರತರತ್ನ ಘೋಷಣೆಯಾದ ಸಂದರ್ಭದಲ್ಲೇ ಅವರ ಮೊಮ್ಮಗ ಜಯಂತ ಚೌಧರಿ ತಮ್ಮ ಆರ್ ಎಲ್ ಡಿ ಪಕ್ಷ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಘೋಷಿಸಿದ್ದರು. ಸೋಮವಾರ ಆರ್ ಎಲ್ ಡಿಯ ಒಂಬತ್ತು ಮಂದಿ ಶಾಸಕರು ಸಿಎಂ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಎನ್ ಡಿಎ ಮೈತ್ರಿಕೂಟ ಸೇರಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯ ಪ್ರಸಕ್ತ ಸಂಖ್ಯಾಬಲ 399 ಆಗಿದ್ದು, ಅಭ್ಯರ್ಥಿಗಳ ಗೆಲುವಿಗೆ 37 ಮತಗಳ ಅಗತ್ಯವಿದೆ. ಆರ್ ಎಲ್ ಡಿಯ ಒಂಬತ್ತು, ರಾಜು ಭಯ್ಯಾ ಅವರ 2 ಹಾಗೂ ಎನ್ ಡಿಎ ಮಿತ್ರಪಕ್ಷಗಳ ಬೆಂಬಲ ಸೇರಿ 288 ಸದಸ್ಯರ ಬೆಂಬಲವನ್ನು ಬಿಜೆಪಿ ಹೊಂದಿದಂತಾಗಿದೆ. ಎಸ್ ಬಿಎಸ್ ಪಿ ಶಾಸಕ ಅಬ್ಬಾಸ್ ಅನ್ಸಾರಿ ಜೈಲಿನಲ್ಲಿರುವುದರಿಂದ ಎನ್ ಡಿಎ ಬಲ 287ಕ್ಕೆ ಇಳಿದಿದೆ. ಎಂಟು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು 296 ಮತ ಪಡೆಯಬೇಕಾದ ಬಿಜೆಪಿಗೆ 9 ಮತಗಳ ಅಗತ್ಯವಿದೆ. ಬೇರೆ ಪಕ್ಷಗಳ ಶಾಸಕರ ಮತ ಸೆಳೆಯುವ ಅಥವಾ ಮತದಾನದಿಂದ ಹೊರಗುಳಿಯುವಂತೆ ಮಾಡುವ ತಂತ್ರವನ್ನು ಬಿಜೆಪಿ ಅನುಸರಿಸಿದೆ. 111 ಶಾಸಕರನ್ನು ಹೊಂದಿರುವ ಎಸ್ಪಿಗೆ ಕಾಂಗ್ರೆಸ್ ನ ಇಬ್ಬರು ಶಾಸಕರ ಬೆಂಬಲದ ಹೊರತಾಗಿಯೂ ಮೂರು ಸ್ಥಾನಗಳ ಕೊರತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News