ಕಾಶ್ಮೀರ ಚುನಾವಣೆ | ಮುಖ್ಯವಾಹಿನಿ ಮಾಧ್ಯಮಗಳ ವರದಿಗಾರಿಕೆಯಲ್ಲಿ ಸಂಪನ್ಮೂಲ ವ್ಯರ್ಥ : ರವೀಶ್‌ ಕುಮಾರ್ ಟೀಕಾ ಪ್ರಹಾರ

Update: 2024-09-26 15:26 GMT

 ರವೀಶ್‌ ಕುಮಾರ್ | PTI

ಹೊಸದಿಲ್ಲಿ : ಪತ್ರಕರ್ತ ರವೀಶ್ ಕುಮಾರ್ ಅವರು ಕಾಶ್ಮೀರ ಚುನಾವಣೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ವಿಶೇಷವಾಗಿ ಪ್ರಸಾರ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಂಪನ್ಮೂಲಗಳ ವ್ಯರ್ಥ ಬಳಕೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಗೋದಿ ಮೀಡಿಯಾಗಳು ಕಾಶ್ಮೀರದ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಪಕ್ಷದ ಅಜೆಂಡಾವನ್ನು ಉತ್ತೇಜಿಸಲು ಹೆಚ್ಚು ಗಮನಹರಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶ್ರೀನಗರದ ದಾಲ್ ಸರೋವರದ ಮುಂದೆ ಅನೇಕ ದೂರದರ್ಶನ ನಿರೂಪಕರು ವಿಸ್ತಾರವಾದ ಸೆಟ್‌ಗಳನ್ನು ಹಾಕಿಕೊಂಡಿದ್ದಾರೆ. ಆದರೆ ಅವರ ವರದಿಗಳು ಮತ್ತು ಚರ್ಚೆಗಳು ಈ ಪ್ರದೇಶದ ಸಮಸ್ಯೆಗಳು, ಅರ್ಥಪೂರ್ಣ ಒಳನೋಟಗಳನ್ನು ನೀಡಲು ವಿಫಲವಾಗಿವೆ. ಈ ಮಾಧ್ಯಮ ಸಂಸ್ಥೆಗಳು ಕೇವಲ ಔಪಚಾರಿಕವಾಗಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿನ ವಾಸ್ತವಗಳನ್ನು ಅನ್ವೇಷಿಸುವ ಅಥವಾ ವರದಿ ಮಾಡುವ ಯಾವುದೇ ನಿಜವಾದ ಉದ್ದೇಶವು ಅವರಿಗೆ ಇಲ್ಲ ಎಂದು ಪತ್ರಕರ್ತ ರವೀಶ್ ಕುಮಾರ್ ಆರೋಪಿಸಿದ್ದಾರೆ.

ಈ ಚಾನೆಲ್‌ಗಳನ್ನು 'ಗಟರ್ ಕಾರ್ಯಕ್ರಮಗಳು' ಎಂದು ಕರೆದಿರುವ ಅವರು, ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ. ಈ ಹಣವನ್ನು ತಮ್ಮ ಉದ್ಯೋಗಿಗಳಿಗೆ ಬೋನಸ್‌ಗಳಾಗಿ ನೀಡಲು ಉಪಯೋಗಿಸಿದ್ದರೆ ಚೆನ್ನಾಗಿತ್ತು ಎಂದು ಅವರು ಗಮನ ಸೆಳೆದಿದ್ದಾರೆ. ಅರ್ಥಹೀನ ಕಾರ್ಯಕ್ರಮಗಳಿಗೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ಎಂದೂ ಅವರು ಪ್ರಶ್ನಿಸಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ, ನ್ಯೂಸ್ ಲಾಂಡ್ರಿಯ ಪತ್ರಕರ್ತೆ ಮನೀಶಾ ಪಾಂಡೆ ಕಾಶ್ಮೀರ ಚುನಾವಣಾ ಅವರ ವರದಿಯ ಯೂಟ್ಯೂಬ್ ಲಿಂಕ್ ಅನ್ನು ಲಗತ್ತಿಸಿರುವ ರವೀಶ್ ಕುಮಾರ್, ಈ ವೀಡಿಯೊವನ್ನು ಮಹತ್ವಾಕಾಂಕ್ಷಿ ಪತ್ರಕರ್ತರು ನೋಡಬಹುದು ಎಂದು ಶಿಫಾರಸು ಮಾಡಿದ್ದಾರೆ. ವೀಕ್ಷಕರ ಬೆಂಬಲದಿಂದಲೇ ನಡೆಯುತ್ತಿರುವ ಸಂಸ್ಥೆಯೊಂದರ ನಿಜವಾದ ಪತ್ರಿಕೋದ್ಯಮದ ಬದ್ಧತೆಗೆ ಅವರು ನ್ಯೂಸ್ ಲಾಂಡ್ರಿ ತಂಡವನ್ನು ಶ್ಲಾಘಿಸಿದ್ದಾರೆ. "ನಿಧಿ ಸಂಗ್ರಹಿಸುವ ದೈನಂದಿನ ಸವಾಲನ್ನು ಎದುರಿಸುತ್ತಿರುವವರು ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಹೇರಳವಾದ ಸಂಪನ್ಮೂಲಗಳನ್ನು ಹೊಂದಿರುವವರು ಚುನಾವಣಾ ಪ್ರವಾಸಗಳನ್ನು ಮಾತ್ರ ನಡೆಸುತ್ತಿದ್ದಾರೆ" ಎಂದು ಪತ್ರಕರ್ತ ರವೀಶ್ ಕುಮಾರ್ ಹೇಳಿದ್ದಾರೆ.

Full View

ಕಾಶ್ಮೀರದ ಆಚೆಗೂ ಭಾರತದಲ್ಲಿ ಜಿಲ್ಲಾಮಟ್ಟಗಳಲ್ಲಿ ಪತ್ರಿಕೋದ್ಯಮದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ರವೀಶ್‌ ಕುಮಾರ್‌ ಕಳವಳ ವ್ಯಕ್ತಪಡಿಸಿದ್ದಾರೆ. ಈ ಅಧಃಪತನದಿಂದ ವೃತ್ತಿಪರತೆಯನ್ನು ಎತ್ತಿಹಿಡಿಯುವುದು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News