ಸೌದಿ ಜೈಲಿನಲ್ಲಿರುವ ಕೇರಳದ ರಹೀಂ ಬಿಡುಗಡೆಗೆ ಕ್ರೌಡ್ ಫಂಡಿಂಗ್ ಮೂಲಕ 34 ಕೋಟಿ ರೂ. ದೇಣಿಗೆ ಸಂಗ್ರಹ
ಕೋಝಿಕ್ಕೋಡ್: ಸೌದಿ ಅರೇಬಿಯಾದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೇರಳ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಕ್ರೌಡ್ ಫಂಡಿಂಗ್ ಮೂಲಕ ಕೇರಳದ ಜನರು ಒಗ್ಗಟ್ಟು ಮತ್ತು ಸಹೃದಯತೆಯಿಂದ ರೂ. 34 ಕೋಟಿ ಸಂಗ್ರಹಿಸಿರುವ ಘಟನೆ ವರದಿಯಾಗಿದೆ.
ಅಬ್ದುಲ್ ರಹೀಮ್ ಕಳೆದ 18 ವರ್ಷಗಳಿಂದ ಸೌದಿ ಜೈಲಿನಲ್ಲಿದ್ದಾರೆ. 2006 ನವೆಂಬರ್ ನಲ್ಲಿ, ತನ್ನ 26 ನೇ ವಯಸ್ಸಿನಲ್ಲಿ, ಅಬ್ದುಲ್ ರಹೀಮ್ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್‌ಗೆ ಹೋಗಿದ್ದರು. ತನ್ನ ವೀಸಾ ಪ್ರಾಯೋಜಕ ಫೈಜ್ ಅಬ್ದುಲ್ಲಾ ಅಬ್ದುಲ್ ರಹ್ಮಾನ್ ಅಲ್ ಶಹರಿ ಅವರ ಮಗ ಅನಸ್ ಅವರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಿತ್ತು.
ಅಂಗವೈಕಲ್ಯತೆಯಿಂದ ಕತ್ತಿನ ಕೆಳಗೆ ನಿಶ್ಚಲನಾಗಿದ್ದ ಅನಸ್ ಗೆ ಕುತ್ತಿಗೆಗೆ ಅಳವಡಿಸಲಾಗಿದ್ದ ಉಪಕರಣದ ಮೂಲಕ ಆಹಾರ ನೀಡಲಾಗುತ್ತಿತ್ತು. 2006 ಡಿಸೆಂಬರ್ 24 ರಂದು ಶಾಪಿಂಗ್‌ಗೆಂದು ಹೊರಗೆ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ಕಾರನ್ನು ಸಿಗ್ನಲ್ ಕಟ್ ಮಾಡಿ ಚಲಿಸುವಂತೆ ಒತ್ತಾಯ ಮಾಡಿದ್ದ ಅನಸ್, ಚಾಲಕ ರಹೀಮ್ ಜೊತೆ ಜಗಳವಾಡಿದ್ದನು. ಇದನ್ನು ತಡೆಯಲು ಮುಂದಾದಾಗ ಆಕಸ್ಮಿಕವಾಗಿ ಕೈ ಕುತ್ತಿಗೆಯಲ್ಲಿದ್ದ ಉಪಕರಣಕ್ಕೆ ತಾಗಿ ಅನಸ್ ಪ್ರಜ್ಞೆ ತಪ್ಪಿ ಬಿದ್ದು, ಬಳಿಕ ಮರಣ ಹೊಂದಿದ್ದಾನೆ.
ಘಟನೆಯ ನಂತರ, ಸೌದಿ ಪೊಲೀಸರು ರಹೀಮ್ ನನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ರಿಯಾದ್ ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸಿದೆ. ಇದರ ನಂತರ, ಯುವಕನ ಬಿಡುಗಡೆಗಾಗಿ ಉನ್ನತ ಮಟ್ಟದಲ್ಲಿ ಹಲವಾರು ಮಧ್ಯಸ್ಥಿಕೆಗಳು ನಡೆದವು, ಆದರೆ ಬಾಲಕನ ಕುಟುಂಬವು ಕ್ಷಮಾದಾನ ನೀಡಲು ಸಿದ್ಧವಾಗಿಲ್ಲ. ಸತತ ಪ್ರಯತ್ನದ ನಂತರ ಇದೀಗ ವೀಸಾ ನೀಡಿದ್ದ ಫೈಜ್ ಕುಟುಂಬ 34 ಕೋಟಿ ರೂಪಾಯಿ ನೀಡಿದರೆ ಕ್ಷಮಾದಾನ ಮಾಡಲು ಒಪ್ಪಿಗೆ ನೀಡಿದೆ.
ಐದು ವರ್ಷಗಳ ಹಿಂದಿನವರೆಗೆ ಅಬ್ದುಲ್ ರಹೀಂ ಬಿಡುಗಡೆಗಾಗಿ ರಚನೆಯಾಗಿದ್ದ ಸಮಿತಿಯು ಅಲ್ಪ ನಿಧಿಯನ್ನು ಸಂಗ್ರಹಿಸಲು ಮಾತ್ರ ಸಫಲವಾಗಿತ್ತು. ಆದರೆ, ಈ ಕುರಿತ ಅಭಿಯಾನ ತೀವ್ರಗೊಂಡ ನಂತರ ವಿಶ್ವಾದ್ಯಂತ ಇರುವ ಕೇರಳ ಜನರಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ ಎಂದು ಶುಕ್ರವಾರ ಸಂಘಟನಾಕಾರರು ತಿಳಿಸಿದ್ದಾರೆ.
ಉನ್ನತ ನ್ಯಾಯಾಲಯಗಳು ಮೇಲ್ಮನವಿಗಳನ್ನು ವಜಾಗೊಳಿಸಿದ್ದವಾದರೂ, ಪರಿಹಾರ ಧನ ನೀಡಿದರೆ ಅಬ್ದುಲ್ ರಹೀಂಗೆ ಕ್ಷಮಾದಾನ ನೀಡಲು ಸೌದಿ ಬಾಲಕನ ಕುಟುಂಬವು ಒಪ್ಪಿಕೊಂಡಿತ್ತು ಎಂದು ಸಮಿತಿಯು ಮಾಧ್ಯಮಗಳಿಗೆ ತಿಳಿಸಿದೆ. ಈ ವಿಚಾರದಲ್ಲಿ ಪಾರದರ್ಶಕತೆಯನ್ನು ಖಾತರಿ ಪಡಿಸಲು ಕಾರ್ಯಕಾರಿ ಸಮಿತಿಯು ಮೊಬೈಲ್ ತಂತ್ರಾಂಶವೊಂದನ್ನೂ ರೂಪಿಸಿತ್ತು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸಮಿತಿ ರಚಿಸಿ ರಹೀಮ್ ಗಾಗಿ ಕ್ರೌಡ್ ಫಂಡಿಂಗ್ ಆರಂಭಿಸಿದ್ದರು. ಪ್ರಮುಖ ಉದ್ಯಮಿ ಬೋಬಿ ಚೆಮ್ಮನ್ನೂರ್ ಒಂದು ಕೋಟಿ ರೂ ನೀಡಿ, ರಾಜ್ಯಾದ್ಯಂತ ಧನ ಸಂಗ್ರಹ ಅಭಿಯಾನವನ್ನು ಘೋಷಿಸಿದಾಗ ನಿಧಿಸಂಗ್ರಹವು ಹೆಚ್ಚು ಗಮನ ಸೆಳೆಯಿತು. ವಿವಿಧ ಧಾರ್ಮಿಕ, ರಾಜಕೀಯ ಮತ್ತು ಪರೋಪಕಾರಿ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಅನಿವಾಸಿ ಮಲಯಾಳಿಗಳು ಮತ್ತು ಕೇರಳ ಮತ್ತು ಹೊರಗಿನ ದಾನಿಗಳು ಕೆಲವೇ ದಿನಗಳಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಒಗ್ಗೂಡಿದ್ದಾರೆ. ಈ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆಫ್‌ಲೈನ್‌ನಲ್ಲಿಯೂ ದೊಡ್ಡ ಪ್ರಮಾಣದ ನಿಧಿ ಸಂಗ್ರಹ ನಡೆದಿದೆ. ಹೀಗೆ ಸಂಗ್ರಹವಾದ ಮೊತ್ತವನ್ನು ಲೆಕ್ಕ ಹಾಕಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ. ರಹೀಮ್ ಬಿಡುಗಡೆಯಾಗಿ ಕೇರಳಕ್ಕೆ ಬಂದರೆ ಡ್ರೈವರ್ ಕೆಲಸ ಕೊಡಿಸುವುದಾಗಿ ಉದ್ಯಮಿ ಬೋಬಿ ಚೆಮ್ಮನ್ನೂರ್ ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಬ್ದುಲ್ ರಹೀಂ ತಾಯಿ, "ನಮ್ಮ ಬಳಿ ರೂ. 34 ಕೋಟಿ ಮೊತ್ತವನ್ನು ಸಂಗ್ರಹಿಸಲು ಯಾವುದೇ ಮಾರ್ಗವಿಲ್ಲದೆ ಇದ್ದುದರಿಂದ ನಮಗೆ ಅದರ ಬಗ್ಗೆ ಯಾವುದೇ ಆಶಾವಾದವಿರಲಿಲ್ಲ. ಅದು ಹೇಗೋ ಈಗ ಸಾಧ್ಯವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಿಧಿ ಸಂಗ್ರಹ
ಅಪ್ಲಿಕೇಶನ್ ನಲ್ಲಿ ನಿಧಿ ಸಂಗ್ರಹದ ಬಗ್ಗೆ ಸದ್ಯ ತೋರಿಸುತ್ತಿರುವ ಮಾಹಿತಿಯ ಪ್ರಕಾರ ಕೇರಳದಿಂದ 23,67,66,444, ಒಟ್ಟಾರೆಯಾಗಿ 1,08,24,551 ರೂ., ಕರ್ನಾಟಕದಿಂದ 28,90,943 ರೂ, ತಮಿಳುನಾಡಿನಿಂದ 13,75,150 ರೂ ಹೀಗೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ರೂ ಹಣ ನಿಧಿಗೆ ಹರಿದು ಬಂದಿದೆ.