ಅಸ್ಸಾಂ ನಲ್ಲಿ ರಾಹುಲ್ ಗಾಂಧಿಗೆ ಭದ್ರತಾ ಸಮಸ್ಯೆಗಳು : ಅಮಿತ್ ಶಾ ಗೆ ಖರ್ಗೆ ಪತ್ರ
ಹೊಸದಿಲ್ಲಿ : ‘ಹಿಂಸಾ ಕೃತ್ಯʼಗಳಿಗಾಗಿ ಅಸ್ಸಾಂ ಪೋಲಿಸರು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣವನ್ನು ದಾಖಲಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಅಸ್ಸಾಂನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಎದುರಿಸಿದ ಭದ್ರತಾ ಸಮಸ್ಯೆಗಳ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಸುರಕ್ಷತೆಯನ್ನು ಖಚಿತಪಡಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಗುವಾಹಟಿ ಪೋಲಿಸರ ಮೇಲೆ ದಾಳಿಯನ್ನು ನಡೆಸುವಂತೆ ಗುಂಪನ್ನು ಪ್ರಚೋದಿಸಿದ್ದ ಆರೋಪದಲ್ಲಿ ಅಸ್ಸಾಂ ಪೋಲಿಸರು ರಾಹುಲ್ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ಬೆಳಿಗ್ಗೆ ರಾಹುಲ್ ನೇತೃತ್ವದ ಯಾತ್ರೆಯು ಅಸ್ಸಾಂ ಪ್ರವೇಶಿಸಲು ರಾಜ್ಯ ಪೋಲಿಸರು ಅವಕಾಶ ನೀಡಿರಲಿಲ್ಲ. ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಿಳಿದು ನಗರದ ಹೊರವಲಯದಲ್ಲಿ ಹಾಕಲಾಗಿದ್ದ ಸುರಕ್ಷತಾ ಬ್ಯಾರಿಕೇಡ್ ಗಳನ್ನು ಕಿತ್ತೆಸೆದಿದ್ದರು.
ಜ.18ರಂದು ಯಾತ್ರೆಯು ರಾಜ್ಯವನ್ನು ಪ್ರವೇಶಿಸಿದಾಗಿನಿಂದ ಝಡ್ ಪ್ಲಸ್ ಭದ್ರತೆಯನ್ನು ಹೊಂದಿರುವ ರಾಹುಲ್ ಅವರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸುವಲ್ಲಿ ಅಸ್ಸಾಂ ಪೋಲಿಸರ ವೈಫಲ್ಯದ ಹಲವಾರು ಘಟನೆಗಳು ನಡೆದಿವೆ ಎಂದು ಖರ್ಗೆ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ.