ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ: ಕಳವಳ ವ್ಯಕ್ತಪಡಿಸಿದ ಭಾರತ
ಹೊಸದಿಲ್ಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬಗ್ಗೆ ರವಿವಾರ ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಪರಿಸ್ಥಿತಿಯ ಉದ್ವಿಗ್ನತೆಯನ್ನು ಶಮನಗೊಳಿಸಬೇಕು ಎಂದು ಆಗ್ರಹಿಸಿದೆ.
ಎಪ್ರಿಲ್ 1ರಂದು ಡಮಾಸ್ಕಸ್ ನಲ್ಲಿರುವ ತನ್ನ ದೂತವಾಸದ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿದೆ ಎಂಬ ಶಂಕೆಯ ಮೇಲೆ, ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, “ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿನ ಶಾಂತಿ ಹಾಗೂ ಭದ್ರತೆಗೆ ಧಕ್ಕೆಯನ್ನುಂಟು ಮಾಡುತ್ತಿರುವ ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ಕುರಿತು ನಾವು ಗಂಭೀರವಾಗಿ ಕಳವಳಗೊಂಡಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದೆ.
“ತಕ್ಷಣವೇ ಉದ್ವಿಗ್ನತೆಯನ್ನು ಶಮನಗೊಳಿಸಬೇಕು, ಪ್ರತೀಕಾರವನ್ನು ಸ್ಥಗಿತಗೊಳಿಸಬೇಕು, ಹಿಂಸಾಚಾರದಿಂದ ಹಿಂದೆ ಸರಿಯಬೇಕು ಹಾಗೂ ರಾಜತಾಂತ್ರಿಕ ಮಾರ್ಗಕ್ಕೆ ಮರಳಬೇಕು ಎಂದು ಆಗ್ರಹಿಸುತ್ತೇವೆ” ಎಂದೂ ತನ್ನ ಪ್ರಕಟಣೆಯಲ್ಲಿ ಒತ್ತಾಯಿಸಿದೆ.
ಸದ್ಯ ಸೃಷ್ಟಿಯಾಗಿರುವ ಪರಿಸ್ಥಿತಿಯ ಮೇಲೆ ಭಾರತವು ನಿಕಟ ನಿಗಾ ವಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.
“ಅಲ್ಲಿನ ಪ್ರಾಂತ್ಯದಲ್ಲಿರುವ ನಮ್ಮ ರಾಜತಾಂತ್ರಿಕರು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದೆ. ಆ ಪ್ರಾಂತ್ಯದಲ್ಲಿ ಭದ್ರತೆ ಹಾಗೂ ಸ್ಥಿರತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದೆ” ಎಂದೂ ಅದು ಹೇಳಿದೆ.